ಶಬರಿಮಲೆ ಮಹಿಳೆಯರ ಪ್ರವೇಶ; ಮರುಪರಿಶೀಲನಾ ಅರ್ಜಿ ವಿಸ್ತೃತ ಪೀಠಕ್ಕೆ

ನವದೆಹಲಿ,ನ 14 :      ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷ ವಯೋಮಿತಿಯ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದ 2018ರ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ.   

ಮರುಪರಿಶೀಲನಾ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ 3:2ರ ಅಭಿಪ್ರಾಯ ವ್ಯಕ್ತವಾದ್ದರಿಂದ ಅದನ್ನು ಏಳು ಸದಸ್ಯರ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿ ಗುರುವಾರ ಆದೇಶ ಹೊರಡಿಸಲಾಯಿತು.   

ಅರ್ಜಿದಾರರು ಧರ್ಮ ಎಂದರೇನು ಮತ್ತು ಅಗತ್ಯ ಧಾರ್ಮಿಕ ಚಟುವಟಿಕೆಗಳ ಕುರಿತು ಚರ್ಚೆ ಯನ್ನು ಮರುಪರಿಶೀಲಿಸುವಂತೆ ಕೋರಿದ್ದಾರೆ. ಒಂದು ವರ್ಗ ಧಾರ್ಮಿಕ ಎಂದು ಪರಿಗಣಿಸುವ ಅಂಶಗಳಿಗಿಂತ ಪ್ರಾರ್ಥಿಸುವ ವೈಯಕ್ತಿಕ ಹಕ್ಕು ದೊಡ್ಡದಾಗಿರುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ. 

ಸುಪ್ರೀಂಕೋರ್ಟ್ ಶಬರಿಮಲಾ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ನಾಲ್ಕು ಹೊಸ ಅರ್ಜಿಗಳು, 56 ಮರುಪರಿಶೀಲನಾ ಅರ್ಜಿಗಳೂ ಮತ್ತು ಐದು ವರ್ಗಾವಣೆ ಅರ್ಜಿಗಳ ವಿಚಾರಣೆ ನಡೆಸಿದ 2018ರ ಸೆಪ್ಟೆಂಬರ್ 28ರಂದು, 10ರಿಂದ 50 ವರ್ಷದ ಮಹಿಳೆಯರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿ ಆದೇಶ ನೀಡಿತ್ತು. ಇದು ದೇಶಾದ್ಯಂತ  ಧಾರ್ಮಿಕ ಮಾತ್ರವಲ್ಲದೇ ರಾಜಕೀಯ ಸಂಚಲನಕ್ಕೂ ಕಾರಣವಾಗಿತ್ತು.   

ಈ ಅರ್ಜಿಯನ್ನು ಮರುಪರಿಶೀಲಿಸುವಂತೆ ಕೋರಿ ಅನೇಕರು ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಹೈಕೋರ್ಟ್ ಫೆ.6ರಂದು ಕಾಯ್ದಿರಿಸಿತ್ತು.