ಬ್ಯಾಂಕ್ ನಲ್ಲಿ ಲಾಕರ್ ಹೊಂದಿದ್ದ ಬಾಂಬರ್ ಆದಿತ್ಯ ರಾವ್

ಬೆಂಗಳೂರು,  ಜ ೨೫,  ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ  ಆದಿತ್ಯ ರಾವ್, ಪೊಲೀಸ್ ತನಿಖೆ ವೇಳೆ ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳನ್ನು  ಬಿಚ್ಚಿಡುವ ಮೂಲಕ ತನಿಖಾಧಿಕಾರಿಗಳಿಗೆ ಅಚ್ಚರಿ ಮೂಡಿಸುತ್ತಿದ್ದಾನೆ. ಪ್ರಕರಣದ  ಕುರಿತು ತೀವ್ರ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆದಿತ್ಯ ರಾವ್, ತಾನು ಬ್ಯಾಂಕ್  ನಲ್ಲಿ ಲಾಕರ್ ಹೊಂದಿದ್ದು, ಬಾಂಬ್ ಇಡುವ ಮುನ್ನ ಆ ಲಾಕರ್ ನಲ್ಲಿ ಬೇರೆ ಬೇರೆ  ವಸ್ತುಗಳನ್ನು ಇಟ್ಟಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಹೀಗಾಗಿ ಇಂದು ತನಿಖಾಧಿಕಾರಿಗಳು ಆತನನ್ನು ಕರ್ನಾಟಕ ಬ್ಯಾಂಕ್ ಗೆ ಕರೆದುಕೊಂಡು ಹೋಗಿ  ಲಾಕರ್ ಪರಿಶೀಲನೆ ಮಾಡಲಿದ್ದಾರೆ. ಆರೋಪಿ ಆದಿತ್ಯ ರಾವ್, ಮಂಗಳೂರು ಕರ್ನಾಟಕ ಬ್ಯಾಂಕ್ ಸೇರಿ ಉಡುಪಿಯ ಕೆಲ ಬ್ಯಾಂಕ್ ನಲ್ಲಿ ಲಾಕರ್ ಹೊಂದಿದ್ದ ಎನ್ನಲಾಗಿದೆ.ಆದಿತ್ಯನನ್ನು ಬ್ಯಾಂಕ್ ಗೆ ಕರೆದೊಯ್ಯುವ ಮೂಲಕ ತನಿಖಾಧಿಕಾರಿಗಳು ಲಾಕರ್ ಸಿಕ್ರೇಟ್ ಭೇದಿಸಲಿದ್ದಾರೆ. ಪ್ರಕರಣಕ್ಕೆ  ಸಂಬಂಧಿಸಿದಂತೆ ಬೆಂಗಳೂರು ಪೊಲೀಸರಿಗೆ ಶರಣಾದ ಆರೋಪಿ ಆದಿತ್ ರಾವ್ ನನ್ನು, 10 ದಿನಗಳ  ಕಾಲ ವಿಚಾರಣೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದ ಹಿನ್ನೆಲೆಯಲ್ಲಿ ತನಿಖೆ  ತೀವ್ರಗೊಳಿಸಲಾಗಿದೆ.