ಅಡಿಕೆಗೆ ಡ್ರಗ್ಸ್ ಪಟ್ಟ : ಮೋದಿ ಸರ್ಕಾರ ಬೆಳೆಗಾರರ ಕ್ಷಮೆ ಯಾಚಿಸಲಿ
ಕಾರವಾರ, ಫೆ.3 : ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾದ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರಿಸಿ, ಅಡಿಕೆ ಬೆಳೆಯುವ ರೈತರಿಗೆ ಸಂಕಷ್ಟ ತಂದ ಮತ್ತು ಅಪಮಾನ ಮಾಡಿದ, ಸರ್ಕಾರ ಅಡಿಕೆ ಬೆಳೆಗಾರರಿಗೆ ಕ್ಷಮೆಯಾಚಿಸಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟಿಗೆ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲವೆಂದು ವೈಜ್ಞಾನಿಕ ಸಂಶೋಧನೆಯ ದಾಖಲೆಯೊಂದಿಗೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ ಎಸ್) ಉತ್ತರ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಇತ್ತೀಚೆಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ದಾಖಲೆಯಾದ ಅಡಿಕೆ ಕೃಷಿ ಮಾರಾಟ ವಾಹಿನಿಯಲ್ಲಿ ಅಡಿಕೆ ಕುರಿತು ದಾಖಲಿಸಿದ ಮಾಹಿತಿಯಿಂದ ಬೆಳೆಗಾರರಲ್ಲಿ ಗೊಂದಲ ಉಂಟಾಗಿದ್ದು, ಅಡಿಕೆ 'ಬೆಲೆಯ ಮೇಲೆ' ತೀವೃ ತರಹದ ಪರಿಣಾಮ ಉಂಟಾಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಅಡಿಕೆ ಬೆಳಗಾರರ ಪರವಾದ ನಿಲುವನ್ನು ಪ್ರಕಟಿಸಿ ಮಧ್ಯಪ್ರವೇಶ ಮಾಡಬೇಕೆಂದು ರೈತ ಸಂಘ ಒತ್ತಾಯಿಸುತ್ತದೆ ಎಂದು ಶಾಂತಾರಾA ನಾಯಕ ಹೇಳಿದ್ದಾರೆ.
೨೦೧೪ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿನ ಚುನಾವಣಾ ಪ್ರಚಾರದಲ್ಲಿ ಉನ್ನತ ಮಟ್ಟದ ಅಡಿಕೆ ಸಂಶೋಧನಾ ಕೇಂದ್ರಕ್ಕೆ ರೂ. ೫೦೦ ಕೋಟಿ ವೆಚ್ಚದಲ್ಲಿ ಶಿವಮೊಗ್ಗಾದಲ್ಲಿ ಪ್ರಾರಂಭಿಸಲಾಗುವುದು ಎಂಬ ಇಂದಿನ ಗೃಹ ಸಚಿವ ಅಮಿತ್ ಷಾ ಆಶ್ವಾಸನೆ ಇಂದಿಗೂ ಈಡೇರಿಸಿಲ್ಲ. ತದನಂತರ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರೋಗ್ಯ ಸಚಿವ ಅನುಪ್ರಿಯಾ ಪಟೇಲ್ ಹಾಗೂ ಅಶ್ವಿನ್‌ಕುಮಾರ ಬೌಬೆ ಅವರುಗಳು ೨೦೧೭ ಮತ್ತು ೨೦೧೯ ರಲ್ಲಿ ಸಂಸತ್ ಅಧಿವೇಶನದಲ್ಲಿಯೇ ಅಡಿಕೆ ಕ್ಯಾನ್ಸರ್ ಮಾರಕವೆಂಬ ಹೇಳಿಕೆ ನೀಡಿರುವುದು ಖಂಡನಾರ್ಹವಾದದ್ದು. ಕೇಂದ್ರದಲ್ಲಿ ಬಿ.ಜೆ.ಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ೭ ವರ್ಷ ಕಳೆದರೂ ಸುಪ್ರೀಂಕೋರ್ಟನಲ್ಲಿ ಅಡಿಕೆ ಹಾನಿಕಾರವಲ್ಲ ಎಂದು ಪ್ರಮಾಣಪತ್ರ ಸಲ್ಲಿಸದೇ ಇರುವುದು ಅಡಿಕೆ ಬೆಳೆಗಾರರಿಗೆ ಕೇಂದ್ರದ ಮೋದಿ ಸರ್ಕಾರ ಎಸಗಿದ ದ್ರೋಹವಾಗಿದೆ ಎಂದು ರೈತ ಸಂಘ ಟೀಕಿಸಿದೆ. ಕೆನರಾ ಲೋಕಸಭಾ ಸದಸ್ಯರಾದ ಅನಂತಕುಮಾರ ಹೆಗಡೆ ಬಾಯಿಮುಚ್ಚಿಕೊಂಡಿದ್ದಾರೆ. ಈ ರೀತಿ ಜನಪ್ರತಿನಿಧಿಗಳು ಮತ್ತು ಸಹಕಾರಿ ಸಂಘಗಳು ಸಹ ಧ್ವನಿ ಎತ್ತಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಶಾಂತಾರಾಮ ನಾಯಕ ಮತ್ತು ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಆಗ್ರಹಿಸಿದ್ದಾರೆ.
..............