ಮೌಢ್ಯ ವಿರೋಧಿ ಕಾನೂನಿನಡಿ ಜ್ಯೋತಿಷ್ಯ, ವಾಸ್ತು ಸೇರಿಸಲಿ: ಲಲಿತಾನಾಯಕ್

ಕಲಬುರಗಿ, ಫೆ.6, ಪುರುಷ ಪ್ರಧಾನ ಸಮಾಜದಲ್ಲಿ ಪುರುಷರ ಆಲೋಚನೆಗಳನ್ನು ಮಹಿಳೆಯರಿಗೆ ಹೋಲಿಕೆ ಮಾಡುತ್ತಿರುವುದು ಸಮಂಜಸವಲ್ಲ ಎಂದು ಹಿರಿಯ ಸಾಹಿತಿ ಡಾ.ಬಿ.ಟಿ. ಲಲಿತಾ ನಾಯಕ್  ವಿಷಾದ ವ್ಯಕ್ತಪಡಿಸಿದ್ದಾರೆ. ಗುಲಬರ್ಗಾ ವಿಶ್ವ ವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನದಂದು ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ‘ಸ್ತ್ರೀ ಲೋಕ : ತಲ್ಲಣಗಳು’ ಗೋಷ್ಠಿಯ ಅಧ್ಯಕ್ಷತೆವಹಿಸಿ ‘ಬದಲಾಗುತ್ತಿರುವ ಮಹಿಳಾ ಸಂವೇದನೆಗಳು’ ಕುರಿತ ಮಾತನಾಡಿದ ಅವರು, ಮಹಿಳೆಯರು ಇದೀಗ ಶೋಷಿತ ಕಾಲಘಟ್ಟದಿಂದ ಹೊರಬಂದಿದ್ದೇವೆ. ಮೀಸಲಾತಿ ಕೊಡಿ ಎಂದು ಕೇಳುವ ಬದಲು, ಎಲ್ಲದಕ್ಕೂ ನಾವು ಶಕ್ತರಾಗಿದ್ದೇವೆ ಎಂಬುದನ್ನು ಸಾರಿ ಹೇಳಬೇಕಿದೆ ಎಂದು ಕರೆ ನೀಡಿದರು.

ದೇಶದಲ್ಲಿ ಅನುಭವಿಸುವ ತಲ್ಲಣಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ನಾವು ಆಲೋಚಿಸಬೇಕು. 12 ನೇ ಶತಮಾನದಲ್ಲಿ ಶರಣರು ಪುರೋಹಿತ ಶಾಹಿ, ವೈದಿಕ ಶಾಹಿಯನ್ನು ಧಿಕ್ಕರಿಸಿ ತಮ್ಮತನವನ್ನು ಮೆರೆದರು. ಈ ಕಾಲದಲ್ಲಿಯೇ ಮಹಿಳೆಯರು ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ತಮ್ಮ ಪ್ರಾತಿನಿಧ್ಯವನ್ನು ಸಾಬೀತುಪಡಿಸಿದ್ದಾರೆ. ಇದೀಗ ನಮ್ಮನ್ನು ಆಳುವ ಸರ್ಕಾರಗಳು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ಚಿಂತಿಸುವ ಅಗತ್ಯವಿದೆ. ಈ ಚಿಂತನೆಯಲ್ಲಿ ಮಹಿಳೆಯರೂ ಚಿಂತನೆಯ ಭಾಗವಾಗಬೇಕಿದೆ ಎಂದರು.

ರಾಜ್ಯದಲ್ಲಿ ಮೌಢ್ಯ ವಿರೋಧಿ ಕಾನೂನು ರಚಿಸಿ ಸರಕಾರ ಉತ್ತಮ ಕಾರ್ಯ ಮಾಡಿದೆ. ಆದರೆ ಈ ಕಾಯ್ದೆ ವ್ಯಾಪ್ತಿಗೆ ಜ್ಯೋತಿಷ್ಯ ಹಾಗೂ ವಾಸ್ತುವನ್ನೂ ಸೇರಿಸಲಿ ಎಂದು ಅವರು ಒತ್ತಾಯಿಸಿದರು.ಪ್ರಸ್ತುತ ವಿದ್ಯಾವಂತರೇ ಮರ್ಯಾದಾ ಹತ್ಯೆ ಮಾಡುತ್ತಿದ್ದಾರೆ. ಏಕೆ ಹಳೆಯ ಪರಂಪರೆಯನ್ನು ನಾವು ಇನ್ನು ಹಳೇಯ ಬೇರನ್ನು ಕಿತ್ತು ಹಾಕುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ತಾಯಿ ತನ್ನ ಮಗಳನ್ನು ಮನೆಯಲ್ಲಿ ಗಂಡನ ಹತ್ತಿರ, ಶಾಲೆಯಲ್ಲಿ ಶಿಕ್ಷಕನ ಹತ್ತಿರ ಕಳುಹಿಸಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆಧುನಿಕತೆ ಎತ್ತ ಕೊಂಡ್ಯೊಯುತ್ತಿದೆ ಎಂದು ಅವರು ಪ್ರಶ್ನಿಸಿದರು.

ಪ್ರೊ. ಶಿವಗಂಗಾ ರುಮ್ಮಾ ಮಾತನಾಡಿ, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ರಹದಾರಿಯಂತೂ ದೊರಕಿತು. ಇಂದಿನ ಮಹಿಳೆಯರ ಗುರಿ ದೇವಾಲಯ ಪ್ರವೇಶ ಮಾತ್ರ ಆಗಬಾರದು, ಸಂಸತ್ ಪ್ರವೇಶದ ಗುರಿ ಮಹಿಳೆಯರಿಗಿರಬೇಕು. ಏಕೆಂದರೆ ಕಾನೂನುಗಳು ರೂಪುಗೊಳ್ಳುವುದು ದೇವಾಲಯಗಳಲ್ಲಿ ಅಲ್ಲ, ಸಂಸತ್‌ನಲ್ಲಿ. ಹೀಗಾಗಿ ಮಹಿಳೆಯರ ಚಿಂತನೆ, ಹೋರಾಟಗಳು ಸಮಾನ ಹಕ್ಕು ಪಡೆಯಲಿಕ್ಕಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ಪಡೆಯುವುದಾಗಬೇಕು ಎಂದು ಹೇಳಿದ ಅವರು, ಹೆಣ್ಣು ಭ್ರೂಣ ಹಾಗೂ ಶಿಶುಗಳಿಗೆ ನಿರೋಧಕ ಶಕ್ತಿ ಹೆಚ್ಚು. ನಂಬಿಕೆ, ಆಚರಣೆ, ಬದುಕಿನ ಶೈಲಿ ಪ್ರಭುತ್ವದ ಭಾಗ. ಕೇವಲ ಸರ್ಕಾರ ಮಾತ್ರ ಪ್ರಭುತ್ವವಲ್ಲ, ಮಠ, ಮಂದಿರ, ಮಸೀದಿ, ಚರ್ಚ್‌ಗಳಲ್ಲಿಯೂ ಕೂಡ ಬದುಕಿನ ಬಹಳಷ್ಟು ನಿಯಮಗಳು ರೂಪುಗೊಳ್ಳುವುದರಿಂದ ಇವೂ ಸಹ ಪ್ರಭುತ್ವದ ಭಾಗವಾಗಿ ಪರಿಣಮಿಸಿವೆ ಎಂದರು.

 ಸಾಹಿತಿ ಡಾ.ಆರ್. ಪೂರ್ಣಿಮಾ ಮಾತನಾಡಿ, ಮಹಿಳೆಗೆ ಶೌಚಾಲಯದ ಜೊತೆಗೆ ಶೌಚಾಲಯ ಕಟ್ಟುವ ಅಧಿಕಾರ ಬೇಕು. ಪ್ರಸ್ತುತ ಮಹಿಳೆಯ ರಾಜಕೀಯ ನೆಲಗಟ್ಟು ಕೂಡ ಅತ್ಯಗತ್ಯವಾಗಿದೆ. ಪ್ರಭುತ್ವದ ಅಧಿಕಾರದಲ್ಲಿ ಮಹಿಳೆಗೆ ದ್ವಿತೀಯ ಸ್ಥಾನ ನೀಡಲಾಗಿದೆ. ಇಲ್ಲಿಯೂ ಸಮಾನ ಸ್ಥಾನ ನೀಡಿಲ್ಲ. ಪ್ರಭುತ್ವ ಎಂಬುದು ಪುರುಷ ಪ್ರಧಾನ ಹಾಗೂ ಪಿತೃ ಪ್ರಧಾನ ಚಿಂತನೆಯ ರೂಪವಾಗಿದೆ ಎಂದರು. ಸಿಲಿಕಾನ್ ಸಿಟಿವೊಂದರಲ್ಲಿಯೇ 30 ದಿನದಲ್ಲಿ ಕೇಂದ್ರ ಸರಕಾರದ ವಿರುದ್ಧ 82 ಪ್ರತಿಭಟನೆಗಳು ನಡೆದಿವೆ. ಪ್ರಜಾಸತಾತ್ಮಕ ಮೌಲ್ಯಗಳ ರಕ್ಷಣೆಗಾಗಿ, ಪುರಾವೆಗಳ ವಿರುದ್ಧ ಮಹಿಳೆಯರೇ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದು ಸ್ಮರಿಸಿಕೊಂಡರು.