ನವದೆಹಲಿ,ಫೆ ೨೬, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಖರೀದಿಯ ರೇಸ್ ಗೆ ಅದಾನಿ ಗುಂಪಿನ ಉದ್ಯಮ ಕೂಡಾ ಹೊಸದಾಗಿ ಸೇರಿಕೊಂಡಿದೆ.ಬಿಡ್ಡಿಂಗ್ ದಾಖಲೆ ಪತ್ರಗಳನ್ನು ಅಧ್ಯಯನ ನಡೆಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕಂಪನಿ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಏರ್ ಇಂಡಿಯಾ ಖರೀದಿ ಅದಾನಿ ಗ್ರೂಪ್ ನ ಆಸಕ್ತಿ ಇನ್ನೂ ಪ್ರಾಥಮಿಕ ಹಂತದಲ್ಲಿದೆ, ಏರ್ ಇಂಡಿಯಾ ಮೇಲಿರುವ ಸಾಲ, ಅನುಭವಿಸುತ್ತಿರುವ ನಷ್ಟವನ್ನು ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನ ನಡೆಸಿದ ನಂತರ ಬಿಡ್ ನಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೆ? ಎಂಬುದು ನಿರ್ಧಾರವಾಗಲಿದೆ. ಒಂದು ಪಕ್ಷ ಬಿಡ್ ನಲ್ಲಿ ಪಾಲ್ಗೊಂಡಿದ್ದೇ ಆದರೆ, ಟಾಟಾ ಗ್ರೂಪ್, ಹಿಂದೂಜಾ ಕುಟುಂಬ, ಇಂಡಿಗೊ ಮತ್ತು ಅಮೆರಿಕಾ ಮೂಲದ ಇಂಟರಪ್ಸ್ ಫಂಡ್ನೊಂದಿಗೆ ಅದಾನಿ ಗುಂಪು ಪೈಪೋಟಿ ನಡೆಸಬೇಕಾಗುತ್ತದೆ. ಎಎಐ ನಿಯಮಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಅಥವಾ ವಿಮಾನಯಾನ ಹೊಂದಿರುವ ಉದ್ಯಮ ಗುಂಪುಗಳು . ಶೇ. ೨೭ ಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿರಬಾರದು. ಈಗಾಗಲೇ ಆರು ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ಗೆ ಇದು ಅಡ್ಡಿಯಾಗುವ ನಿರೀಕ್ಷೆಯಿದೆ. ಏರಿಂಡಿಯಾ ಬಿಡ್ಡಿಂಗ್ ನ ಮಾರ್ಚ್ ೧೭ ರ ಅಂತಿಮ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಈ ವಾರ ನಡೆಯುವ ಅಂತರ ಸಚಿವಾಲಯ ಸಮಿತಿ ಸಭೆಯಲ್ಲಿ ಹೊಸ ಗಡುವಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.