ಭಾಸ್ಕರ್ ರಾವ್ ಅವರಿಗೆ ದೂರು ನೀಡಿದ ನಟಿ ಸಂಜನಾ: ಆರೋಪ-ಪ್ರತ್ಯಾರೋಪ ಮುಂದುವರಿಕೆ

ಬೆಂಗಳೂರು,  ಡಿ. 27 "ಗಂಡ ಹೆಂಡತಿ" ಚಿತ್ರ ಖ್ಯಾತಿಯ ನಟಿ ಸಂಜನಾ ಗಲ್ರಾನಿ, ಬಾಲಿವುಡ್  ನಿರ್ಮಾಪಕಿಯೊಬ್ಬರ ಮೇಲೆ ವಿಸ್ಕಿ ಗ್ಲಾಸ್‌ ಅನ್ನು ಎಸೆದು ಗಲಾಟೆ ಮಾಡಿದ್ದಾರೆ ಎಂಬ ಆರೋಪ  ಕೇಳಿಬಂದಿದೆ. ಡಿಸೆಂಬರ್  24ರಂದು ಪಂಚತಾರಾ ಹೋಟೆಲ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಸಂಜನಾ ಹಾಗೂ ನಿರ್ಮಾಪಕಿ  ವಂದನಾ ಜೈನ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಗಲಾಟೆ ನಡೆದಿದ್ದು ತಮ್ಮ ಕೈಲಿದ್ದ  ವಿಸ್ಕಿ ಗ್ಲಾಸನ್ನು ವಂದನಾ ಮೇಲೆ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಭಾನುವಾರ  ರಾತ್ರಿ ರಿಚ್ ಮಂಡ್ ಟೌನ್‍ನ ಸ್ಟಾರ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಇಬ್ಬರ  ನಡುವೆ ಮಾತಿಗೆ ಮಾತು ಜಗಳ ನಡೆದಿದೆ ಎನ್ನಲಾಗಿದೆ. ಬಳಿಕ ವಂದನಾ, ಕಬ್ಬನ್  ಪಾರ್ಕ್  ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ  ಘಟನೆ ಬಗ್ಗೆ ಸಂಜನಾ ಗಲ್ರಾನಿ ಮೊದಲು ಮಾತನಾಡಿ, "ಈಗ ಹರಿದಾಡುತ್ತಿರುವ ವದಂತಿಗಳೆಲ್ಲಾ  ಸುಳ್ಳು. ನಾನು ಮತ್ತು ನನ್ನ ಗೆಳತಿ ಸಣ್ಣಪುಟ್ಟ ವಾಗ್ವಾದ ಮಾಡಿಕೊಂಡಿದ್ದೇವೆ. ಅವರು  ಏನೋ ಜೋಶ್‌ನಲ್ಲಿ ಒಂದು ಕ್ಷಣಕ್ಕಾಗಿ ಪೊಲೀಸ್ ಠಾಣೆಗೆ ಹೋದರು. ನಡೆದದ್ದು ಅಷ್ಟೇ. ನಾವು  ಏನು ವಾಗ್ವಾದ ಮಾಡಿಕೊಂಡೆವು, ನಮ್ಮ ನಡುವೆ ಏನು ನಡೆಯಿತು ಎಂಬುದನ್ನು ಅಲ್ಲೇ ಇದ್ದ  ನನ್ನ ಸಹೋದರ ರೆಕಾರ್ಡ್ ಮಾಡಿಕೊಂಡಿದ್ದಾರೆ. ಹಾಗಾಗಿ ನನ್ನ ಬಗ್ಗೆ ಯಾರಾದರೂ  ಹೊಸಹೊಸದಾಗಿ ಮಾತನಾಡಿದರೆ, ಆ ವಿಡಿಯೋ ನನ್ನ ಹತ್ತಿರ ಸೇಫ್ಟಿ ಫ್ರೂಪ್‌ಗಾಗಿ  ಇಟ್ಟುಕೊಂಡಿದ್ದೇನೆ" ಎಂದಿದ್ದಾರೆ."ಯಾವುದೇ ಕಾರಣಕ್ಕೂ ಆ  ವಿಡಿಯೋ ಫ್ರೂಪನ್ನು ರಿಲೀಸ್ ಮಾಡಲ್ಲ. ನನಗೆ ಈ ರೀತಿಯ ಪ್ರಚಾರ ಬೇಕಾಗಿಲ್ಲ. ನಾನು ನನ್ನ  ಮನೆಯಲ್ಲಿ ಆರಾಮವಾಗಿ ಇದ್ದೇನೆ. ಯಾರ ಜೊತೆಗೆ ಜಗಳ ಆಯ್ತೋ ಅವರೂ ಅಷ್ಟೇ ಅವರ ಜೊತೆಗೆ  ಆರಾಮವಾಗಿ ಇದ್ದಾರೆ. ಇಲ್ಲಿಗೆ ಕಥೆ ಮುಗಿಯಿತು. ಈ ಕಥೆಗೆ ಮುಂದುವರೆಸುವುದು  ಇಷ್ಟವಿಲ್ಲ. ಇಬ್ಬರು ಗೆಳತಿಯರ ನಡುವೆ ಸಣ್ಣಪುಟ್ಟ ವಾಗ್ವಾದ ಆಗಿದೆ. ಅದನ್ನು  ಸಾರ್ವಜನಿಕವಾಗಿ ಬಂದು ಹೇಳುವ ಅವಶ್ಯಕತೆ ಇಲ್ಲ. ಕಲಾವಿದರಾದ ನಮಗೆ ಪರ್ಸನಲ್ ಲೈಫ್  ಇಲ್ಲವೇ? ಸಮಾಜದ ಬಗ್ಗೆ ಕಾಳಜಿ ನನಗೂ ಇದೆ. ನಾವು ನಿಯಂತ್ರಣದಲ್ಲೇ ಇದ್ದೇನೆ,  ಸಂತೋಷವಾಗಿ ಇದ್ದೇವೆ. ನನಗೆ ಈ ಬಿಟ್ಟಿ ಪ್ರಚಾರ ಬೇಕಾಗಿಲ್ಲ" ಎಂದರು. ಇಂದು ಘಟನೆಯ ಕುರಿತು ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರಿಗೆ ತಾವು ದೂರು ನೀಡಿರುವುದಾಗಿ ಸಂಜನಾ ಸ್ಪಷ್ಟಪಡಿಸಿದರು. ಹೋಟೆಲ್  ಗೆ ವಂದನಾ ಜೈನ್ ಅವರು ತಮ್ಮ ಸ್ನೇಹಿತರೊಂದಿಗೆ ಬಂದಿದ್ದರೇ, ನಾನು ಕುಟುಂಬ ಸಮೇತ  ಪಾರ್ಟಿಗೆ ತೆರಳಿದ್ದೆ. ಆಗ ನನ್ನ ತಾಯಿ ಹಾಗೂ ತಂಗಿಯನ್ನು ವಂದನಾ ಬೈದಿದ್ದಕ್ಕೆ ಕೋಪ  ಬಂತು. ಈ ವಿಷಯವಾಗಿಯೇ ಇಬ್ಬರ ನಡುವೆ ವಾಗ್ವಾದ ಆರಂಭವಾಯಿತು. ಅಲ್ಲದೆ, ನನ್ನನ್ನು  ಜೈಲಿಗೆ ಕಳುಹಿಸುವುದಾಗಿ ವಂದನಾ ಬೆದರಿಕೆ ಹಾಕಿದರು. ಆದ್ದರಿಂದ ನಾನು ವಂದನಾರನ್ನು  ಬೈದೆ ಎಂದರು. ಅಲ್ಲದೇ, ವಂದನಾ ನನ್ನ ಬೆರಳನ್ನು ಟ್ವಿಸ್ಟ್ ಮಾಡಿ, ನನ್ನ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದರು ಎಂದು ಆರೋಪಿಸಿದರು. ಕ್ರಿಕೆಟಿಗ  ಅಮಿತ್ ಮಿಶ್ರಾ ಅವರನ್ನು ವಂದನಾ ಅವರೇ ಬೀದಿಗೆ ತಂದಿರುವುದು. ಭಾರತ ಕ್ರಿಕೆಟ್  ತಂಡದಿಂದ ಅವರು ಹೊರಬರಲು  ವಂದನಾ ಕಾರಣ ಎಂದು ಅವರು ಗಂಭೀರ ಆರೋಪ ಮಾಡಿದರು. ದೂರಿನ ಪ್ರತಿ ಸಲ್ಲಿಕೆ: ನಟಿ ಸಂಜನಾ ಗಲ್ರಾನಿ ಹಾಗೂ‌ ಬಾಲಿವುಡ್  ನಿರ್ಮಾಪಕಿ ವಂದನಾ ಜೈನ್  ಗಲಾಟೆಗೆ ಸಂಬಂಧಿಸಿದಂತೆ ಶನಿವಾರ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ  ಅವರಿಗೆ ಸಂಜನಾ ಅವರು ಶನಿವಾರ ದೂರಿನ ಪ್ರತಿ ಸಲ್ಲಿಸಿದ್ದಾರೆ. ಶುಕ್ರವಾರ  ನಗರದ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರಿಗೆ ಸಂಜನಾ ಅವರು‌ ವಂದನಾ ವಿರುದ್ಧ  ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ತಮ್ಮ ತಾಯಿ, ವಕೀಲರೊಂದಿಗೆ ಡಿಪಿಸಿ  ಕಚೇರಿಗೆ ಆಗಮಿಸಿ ದೂರಿನ ಪ್ರತಿ ಸಲ್ಲಿಸಿದ್ದಾರೆ. ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಾತ್ಮಕ ವಾಗಿ ಪೊಲೀಸರಿಗೆ ದೂರು  ನೀಡಿದ್ದು, ನನ್ನ ಬ್ಲ್ಯಾಕ್ ಮೇಲ್ ಮಾಡಿದರ ಬಗ್ಗೆ ದೂರಿನಲ್ಲಿ ವಿವರಿಸಿದ್ದೇನೆ ಎಂದು  ಮಾಹಿತಿ ನೀಡಿದರು. ನಾನೇನು  ಮಾಡಿಲ್ಲ. ವಂದನಾ ಮೇಲೆ ಮದ್ಯದ ಬಾಟಲಿ ಒಡೆದಿರುವುದರ ಕುರಿತು ಯಾವುದೇ ಸಾಕ್ಷಿಗಳಿಲ್ಲ.   ಅವರೇ ಬಂದು ಜಗಳ ತೆಗೆದು, ನಂತರ ಅವರೇ ನನ್ನ ವಿರುದ್ಧ ದೂರು ದಾಖಲಿಸಿದ್ದರು ಎಂದು  ಅವರು ದೂರಿದರು. ನಾನು ಕೇವಲ  ಟಾರ್ಗೆಟ್, ವಿಕ್ಟಿಮ್ ಅಷ್ಟೇ. ವೈಯಕ್ತಿಕವಾಗಿ ನನಗೇನು ಅವರ ಮೇಲೆ ದ್ವೇಷವಿಲ್ಲ.  ಅಲ್ಲದೇ, ನನಗೇನು ಅವರ ಮೇಲೆ ರಜ್ಜಿಲ್ಲ. ಅವರೇ ನನ್ನನ್ನು ಜೈಲಿಗೆ ಹಾಕಿಸುವುದಾಗಿ  ಬೆದರಿಕೆ ಹಾಕಿದ್ದಾರೆ ಎಂದರು. ಯಾರನ್ನಾದರೂ ಟಾರ್ಗೆಟ್ ಮಾಡುವುದು, ಅವರ ಹೆಸರು ಕೆಡಿಸುವುದೇ ಅವರ ಕೆಲಸ. ಅವರಿಗೆ ಹೊಟ್ಟೆ ಕಿಚ್ಚು ಹೆಚ್ಚು. ಈ ಪ್ರಕರಣದಲ್ಲಿ ವಿಸ್ಕಿ ಬಾಟಲ್ ಇಲ್ಲವೇ ಇಲ್ಲ. ಅದು  ಎಲ್ಲಿಂದ ಬಂತು ? ಎಂದು ಅವರು ಪ್ರಶ್ನಿಸಿದರು. ದಯವಿಟ್ಟು  ನನ್ನ ಹೆಸರನ್ನು ಹಾಳು ಮಾಡಬೇಡಿ. ಹೀಗಾದರೇ, ನಿರ್ದೇಶಕರು, ನಿರ್ಮಾಪಕರು ಏನೆಂದು  ಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ವಿಸ್ಕಿ ಎನ್ನುವ ಪದವೇ ಅಲ್ಲಿ  ಇಲ್ಲ. ಅಲ್ಲಿ ವಿಸ್ಕಿ ಬಾಟಲೇ ಇರಲಿಲ್ಲ. ಅವರ ಮುಖದ ಮೇಲೆ ಏನಾದರೂ ಗಾಯದ ಗುರುತುಗಳಿವೆಯಾ ಎಂದು ವಂದನಾ ವಿರುದ್ಧ ಕಿಡಿಕಾರಿದರು.