ವಿವಿಗಳು ಹೊರನಾಡ ಕನ್ನಡರಿಗೆ ಪ್ರವೇಶಾತಿ ನಿರಾಕರಿಸಿದರೆ ಕ್ರಮ: ಟಿ.ಎಸ್.ನಾಗಾಭರಣ’’

ಬೆಂಗಳೂರು, ಫೆ 20 -ಹೊರ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳು ಪ್ರವೇಶ ನಿರಾಕರಿಸುವಂತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ತಂತ್ರಜ್ಞಾನದಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಇಲಾಖಾ ಮುಖ್ಯಸ್ಥರೊಂದಿಗೆ  ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೀದರ್ ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ಹೊರ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗೆ ಪ್ರವೇಶಾತಿ ನಿರಾಕರಿಸಿದ್ದನ್ನು ಉಲ್ಲೇಖಿಸಿ ಈ ಎಚ್ಚರಿಕೆ ನೀಡಿದ್ದಾರೆ. 

ಹೊರ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮುಂದುವರಿಸಬಹುದು ಎಂದು ಸರ್ಕಾರದ ಆದೇಶವಿದೆ. ಹಾಗಿದ್ದೂ ಪ್ರವೇಶ ನಿರಾಕರಿಸಿರುವುದು ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಇದು ಹೀಗೆ ಮುಂದುವರಿದರೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದರು.

     ಬೀದರ್ ನಲ್ಲಿರುವ ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ಹೊರ ರಾಜ್ಯಗಳಲ್ಲಿ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಪ್ರವೇಶಾತಿ ನೀಡದೆ ನಿರಾಕರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಸದರಿ ಆದೇಶವನ್ನು ಹಿಂಪಡೆದು ಸರ್ಕಾರದ ಭಾಷಾನೀತಿ ಅನ್ವಯ ಹೊರ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿರುವವರಿಗೆ ಪ್ರವೇಶಾತಿ ನೀಡುವಂತೆ ಸೂಚಿಸಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರುವುದರಿಂದ ಎಲ್ಲಾ ಇಲಾಖೆಗಳು ಜಾಲತಾಣಗಳ ಮೂಲಕ ಜನಭಾಷೆಯಲ್ಲಿಯೇ ಜನರಿಗೆ ಮಾಹಿತಿಗಳನ್ನು ಒದಗಿಸಬೇಕು. ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಡಿ  ಬರುವ ಬಹುತೇಕ ನಿಗಮ ಮಂಡಳಿಗಳು, ಇಲಾಖೆಗಳು, ವಿಶ್ವವಿದ್ಯಾಲಯಗಳ ಜಾಲತಾಣಗಳು ಕನ್ನಡದಲ್ಲಿಲ್ಲ. ಮುಖಪುಟ ಮತ್ತು ಒಳಮಾಹಿತಿಗಳು ಕೂಡ ಕನ್ನಡದಲ್ಲಿಲ್ಲ ಎಂದು ಖುದ್ದು ಪರಿಶೀಲಿಸಿ ತೀವ್ರ ಬೇಸರ ವ್ಯಕ್ತಪಡಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು.     

ಕರ್ನಾಟಕ ಹಾಲು ಮಂಡಳಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಕುಕ್ಕಟ ಮಹಾಮಂಡಳ ನಿಯಮಿತ, ಮೀನುಗಾರಿಕೆ ಇಲಾಖೆ,  ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಇಲಾಖಾ ಮುಖ್ಯಸ್ಥರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.