ಪ್ರಾಮಾಣಿಕತೆ, ಛಲದಿಂದ ಸಾಧನೆ ಮಾಡಿರಿ: ಶಂಕರಾನಂದ ಬನಶಂಕರಿ

ಪ್ರಾಮಾಣಿಕತೆ, ಛಲದಿಂದ ಸಾಧನೆ ಮಾಡಿರಿ: ಶಂಕರಾನಂದ ಬನಶಂಕರಿ  Achieve with honesty and integrity: Shankarananda Banashankari

ಲೋಕದರ್ಶನ ವರದಿ 

ಬೆಳಗಾವಿ 25: ಪ್ರಮಾಣಿಕವಾಗಿ ಸೇವೆ ಮಾಡಿದರೆ ಜೀವನದಲ್ಲಿ ಉತ್ತಮ ಅವಕಾಶಗಳು ದೊರಕುತ್ತವೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿಯವರು ಹೇಳಿದರು.  

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಬೋಧಕ ಹಾಗೂ ಬೋಧಕೇತರ ನೌಕರರ ಸಂಘದ ವತಿಯಿಂದ ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಕ್ರೀಡಾಕೂಟ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಹೇಳಿದರು.  

ಮುಖ್ಯ ಅತಿಥಿಗಳಾಗಿ ಬೋಧಕ ಹಾಗೂ ಬೋಧಕೇತರ ನೌಕರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಇರುವ ಹುದ್ದೆಗೆ ಸೀಮಿತವಾಗಿರದೆ ಇನ್ನೂ ಉನ್ನತವಾದ ಹುದ್ದೆ ಪಡೆಯಬೇಕೆಂಬ ಛಲ ಎಲ್ಲರಿಗೂ ಇರಬೇಕು ಎಂದು ಆಶಿಸಿದರು. ಉನ್ನತ ಹುದ್ದೆಗಳಿಗೆ ಏರಲು ಅನುಕೂಲವಾಗುವಂತಹ ಕ್ರಿಯಾಶೀಲ ಪ್ರತಿಭೆಗಳನ್ನು ಬೆಳೆಸಿಕೊಳ್ಳಿ, ಜೊತೆಗೆ ನಿಮ್ಮ ಮಕ್ಕಳಿಗೂ ಉನ್ನತ ಹುದ್ದೆಗಳಿಗೆ ಆಕಾಂಕ್ಷಿಸಲು ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.  

ಕುಲಸಚಿವ ಸಂತೋಷ್ ಕಾಮಗೌಡ ಅವರು ಮಾತನಾಡಿ ಎಲ್ಲ ಬೋಧಕೇತರ ನೌಕರರ ಸೇವೆಯನ್ನು ಪ್ರಶಂಶಿಸಿ ಹೀಗೆಯೇ ನಿಷ್ಠೆಯಿಂದ ಸೇವೆಯಲ್ಲಿ ಮುಂದೆವರೆಯಿರಿ ಎಂದು ಸಲಹೆ ನೀಡಿದರು.  

ಅಧ್ಯಕ್ಷತೆ ವಹಿಸಿದ ಕುಲಪತಿಗಳು ಪ್ರೊ.ಸಿ.ಎಂ.ತ್ಯಾಗರಾಜ ಮಾತನಾಡಿ, ಬೋಧಕೇತರ ನೌಕರರ ಸೇವೆಯನ್ನು ಶ್ಲಾಘಿಸಿದರು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನೌಕರರ ವ್ಯಕ್ತಿತ್ವ ಅಭಿವೃದ್ಧಿಗೆ ಸಹಾಯ ಮಾಡುತ್ತವೆ ಎಂದು ಹೇಳಿ ಎಲ್ಲ ವಿಜೇತನ್ನು ಅಭಿನಂದಿಸಿದರು. ಹಾಗೆಯೇ, ನೌಕರರ ಕಲ್ಯಾಣಕ್ಕಾಗಿ ವಿಶ್ವವಿದ್ಯಾಲಯದಿಂದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.                          

ವಿವಿಧ ರೀತಿಯ ಸಾಧನೆಗಳನ್ನು ಮಾಡಿದ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಗಳಿಂದ ಸನ್ಮಾನಿಸಲಾಯಿತು, ವಿಶ್ವವಿದ್ಯಾಲಯದಿಂದ ಕಾರ್ಮಿಕ ಇಲಾಖೆಯ ’ಬಿ’ ದರ್ಜೆ ಹುದ್ದೆಗೆ ನೇಮಕಗೊಂಡ ರಾಘವೇಂದ್ರ ಅಣವೇಕರ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು ಹಾಗೂ ಬೋಧಕ ಹಾಗೂ ಬೋಧಕೇತರ ನೌಕರರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.  

ಕುಲಸಚಿವರು (ಮೌ) ಪ್ರೊ.ಡಿ.ನ್‌. ಪಾಟೀಲ ಮತ್ತು ಹಣಕಾಸು ಅಧಿಕಾರಿಗಳು ಎಂ.ಎ. ಸಪ್ನಾ ಉಪಸ್ಥಿತರಿದ್ದರು. ಸ್ನಾತಕೋತ್ತರ ಬೋಧಕ ಸಂಘದ ಅಧ್ಯಕ್ಷ ಪ್ರೊ. ಜೆ. ಮಂಜಣ್ಣ ಪ್ರಸ್ತಾಪಿಸಿದರು. ಉಪಾಧ್ಯಕ್ಷ ಡಾ.ನಂದಿನಿ ದೇವರಮನಿಯವರು ಸ್ವಾಗತಿಸಿದರು. ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಉಪ್ಪಾರ ವಂದಿಸಿದರು. ಫರಜಾನಾ ಶಿಪಾಯಿ ಮತ್ತು ವಿಕ್ರಮ ಮಿರ್ಜಿ ನಿರೂಪಿಸಿದರು. ಸ್ನಾತಕೋತ್ತರ ಬೋಧಕ ಹಾಗೂ ಬೋಧಕೇತರ ಸಂಘದ ಇತರ ಪದಾಧಿಕಾರಿಗಳು, ಡೀನರು, ಮುಖ್ಯಸ್ಥರು, ಆಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.