ಅಬಕಾರಿ ಅಕ್ರಮ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ : ಡಾ. ಹರೀಶ್ ಕುಮಾರ

Dc office meet

ಅಬಕಾರಿ ಅಕ್ರಮ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ : ಡಾ. ಹರೀಶ್ ಕುಮಾರ


ಕಾರವಾರ ಅ. 20 : ಜಿಲ್ಲೆಯಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಕೆ  ಹಾಗೂ ಮಾರಾಟವನ್ನು ತಡೆಗಟ್ಟಲು ಕ್ರಿಯಾಯೋಜನೆಯೊಂದನ್ನು ರೂಪಿಸಿಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ  ಸೂಚಿಸಿದರು.

     ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿ ಜರುಗಿದ ಜಿಲ್ಲಾ ಅಬಕಾರಿ ಇಲಾಖೆಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಮಮಾರ್ಗದಲ್ಲಿ ಕಳ್ಳಬಟ್ಟಿ ತಯಾರಿಕೆ ನಡೆಯುತ್ತವೆ ಇವುಗಳ ಕುರಿತು ದೂರು ನೀಡಲು ಜನರಲ್ಲಿ ಅರಿವು ಮೂಡಿಸಬೇಕು, ಗ್ರಾಮಸಭೆಗಳಲ್ಲಿ ಅಬಕಾರಿ ಉಪ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡು ಕೈಪಿಡಿ ಅನುಸಾರ ಸ್ರ್ತೀ ಶಕ್ತಿ ಸಂಘದ ಅಧ್ಯಕ್ಷರು, ಸದಸ್ಯರು, ಆಯಾ ಗ್ರಾಮದ ಹಿರಿಯರು, ಮುಂಖಡರು, ಯುವಕರು ಹಾಗೂ ಸ್ಥಳೀಯರನ್ನು ಒಟ್ಟುಗೂಡಿಸಿ ಕಳ್ಳಬಟ್ಟಿಯಿಂದಾಗುವ ದುಷ್ಟಪರಿಣಾಮಗಳ ಬಗ್ಗೆ ತಿಳುವಳಿಕೆಯನ್ನು ನೀಡಬೇಕು. ಸರ್ಕಾರದ ಮುಖ್ಯ ಉದ್ದೇಶವೇ ಜನರ ಆರೊಗ್ಯ ಕಾಪಾಡುವುದಾಗಿರುತ್ತದೆ ಜನರ ಸಮಸ್ಯೆಗೆ ಹಾಗೂ ಅವರು ನೀಡುವ ಮಾಹಿತಿಗೆ  ಸ್ಪಂದಿಸುತ್ತೇವೆ ಎಂಬ ವಿಶ್ವಾಸವನ್ನು ಅವರಲ್ಲಿ  ಮೂಡಿಸಿ,  ವಿವಿಧ ಇಲಾಖೆ ಹಾಗೂ ಸಾರ್ವಜನಿಕ ಸಹಕಾರದೊಂದಿಗೆ ಕಳ್ಳಬಟ್ಟಿ ತಡೆಗಟ್ಟುವ ಚಟುವಟಿಕೆಗಳನ್ನು ಚುರುಕುಗೊಳ್ಳಿಸಬೇಕೆಂದರು.

     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಮಾತನಾಡಿ, ಅಬಕಾರಿ ಇಲಾಖೆಯೊಂದಿಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಯು  ಜಂಟಿಯಾಗಿ ಕಳ್ಳಬಟ್ಟಿ  ಸಾರಾಯಿ ತಯಾರಿಕೆ ಹಾಗೂ ಮಾರಾಟ ತಡೆಗಟ್ಟಲು ಕಾರ್ಯನಿರ್ವಹಿಸಬೇಕಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಸ್ವಸಹಾಯ ಸಂಘಗಳ ಸಹಾಯ ಪಡೆದು ಪರಿಣಾಮಕಾರಿ ಮತ್ತು ಮಾನಸಿಕ ಪರಿವರ್ತನೆ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಕಾರ್ಯನಿವಹಿಸಬೇಕಗುತ್ತದೆ ಎಂದು ತಿಳಿಸಿದರು.

    ಜಿಲ್ಲಾ ಅಬಕಾರಿ ಇಲಾಖೆ ಉಪ ಆಯುಕ್ತರಾದ ಶಿವನಗೌಡ ಮಾತನಾಡಿ, ರಾಜಸ್ವ ಸಂಗ್ರಹಣೆ  ಒಂದೇ ಅಬಕಾರಿ ಇಲಾಖೆಯ ಮುಖ್ಯ ಉದ್ದೇಶವಾಗಿರುವುದಿಲ್ಲ ಅಬಕಾರಿ ಇಲಾಖೆಯ ಪ್ರಾಥಮಿಕ ಗುರಿಯು ಸಾರ್ವಜನಿಕರಿಗೆ ಗುಣ್ಣಮಟ್ಟದ ಮದ್ಯವನ್ನು ಒದಗಿಸುವುದು ಹಾಗೂ ಸಾರ್ವಜನಿಕರ ಮೇಲೆ ಅನಧಿಕೃತ ಮದ್ಯಸೇವನೆಯಿಂದ ಉಂಟಾಗುವ ದುಷ್ಟಪರಿಣಾಮವನ್ನು ತಪ್ಪಿಸುವುದರ ಮೂಲಕ ಸಾರ್ವಜನಿಕರ ಅರೋಗ್ಯ ರಕ್ಷಣೆ ಹಾಗೂ ಪ್ರಾಣ ಹಾನಿಯನ್ನು ತಡೆಯುವುದಾಗಿರುತ್ತದೆ. ಈ ಉದ್ದೇಶಿತ ಸಾಧನೆಯಲ್ಲಿ ಕಳ್ಳಬಟ್ಟಿ, ನಕಲಿ ಮದ್ಯ, ವಿಷಪೂರಿತ ಮದ್ಯಗಳ ತಯಾರಿಕೆ ಸಾಗಾಣಿಕೆ ಮತ್ತು ಮರಾಟದಂತಹ ಪ್ರಮುಖ ಸಮಸ್ಯೆಗಳನ್ನು ಅಬಕಾರಿ ಇಲಾಖೆಯು ಎದುರಿಸುತ್ತದೆ ಎಂದರು.

    ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದಂತಹ ಎಲ್ಲಾ ಕಳ್ಳಬಟ್ಟಿ ಕೇಂದ್ರಗಳನ್ನು 2012ರ ಏಪ್ರಿಲ್ ತಿಂಗಳ ಅಂತ್ಯಕ್ಕೆ ನಿರ್ಮೂಲನೆಗೊಳಿಸಿ ಕಳ್ಳಬಟ್ಟಿ ದಂಧೆಯನ್ನು ನಿಯಂತ್ರಣಕ್ಕೆ ತರಲಾಗಿದ್ದರೂ ಸಹ ಪುನಃ ಕಳ್ಳಬಟ್ಟಿ ಮರುಕಳಿಸಿರುವುದು ಕಂಡುಬಂದಿದ್ದರಿಂದ ಜಿಲ್ಲೆಯಲ್ಲಿ 8 ಸಣ್ಣ ಮತ್ತು 5 ಮಧ್ಯಮ ಕಳ್ಳಬಟ್ಟಿ ಕೇಂದ್ರಗಳನ್ನು ವಿಚಕ್ಷಣೆಯಲ್ಲಿಡಲಾಗಿದೆ ಎಂದು ಮಾಹಿತಿ ನೀಡಿದರು. 

 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ  ಎಂ.‌ ರೋಷನ್, ಎಸಿ ಪ್ರಿಯಾಂಗಾ .ಎಂ. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು. 

                              *******************