ಬಸವಕಲ್ಯಾಣದಲ್ಲಿ 500 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪ: ಬೆಂಗಳೂರಿನಲ್ಲಿ 500 ಕೋಟಿ ವೆಚ್ಚದಲ್ಲಿ ಫಿಲಂ ಸಿಟಿ

ಬೆಂಗಳೂರು, ಮಾ.5, ಸದಾ ಸಂಸ್ಕೃತಿ, ಪರಂಪರೆ, ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ನೇತೃತ್ವದ ಸರ್ಕಾರ ಬಜೆಟ್ನಲ್ಲಿ ಈ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕಂಡುಬರುತ್ತಿದೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ಮಂಡಿಸಿದ 2020-21ನೇ ಸಾಲಿನ ಬಜೆಟ್ನಲ್ಲಿ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಒಟ್ಟಾರೆ 4,552 ಕೋಟಿ ರೂ. ನಿಗದಿಪಡಿಸುವುದಾಗಿ ಪ್ರಕಟಿಸಿದ್ದಾರೆ.ರಾಜ್ಯದಲ್ಲಿ ಹೇರಳವಾಗಿರುವ ನೈಸರ್ಗಿಕ ಹಾಗೂ ಜೀವವೈವಿಧ್ಯದ ಸಂರಕ್ಷಣೆಗೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವದೊಂದಿಗೆ ಕ್ರಮ ವಹಿಸಲಿದೆ. ಬಸವಣ್ಣನವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಬಸವಕಲ್ಯಾಣದಲ್ಲಿ 500 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲಾಗುವುದು. ಇದಕ್ಕಾಗಿ ಈ ಸಾಲಿನ ಬಜೆಟ್ನಲ್ಲಿ 100 ಕೋಟಿ ರೂ. ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ಚಿತ್ರದುರ್ಗ ಜಿಲ್ಲೆಯಲ್ಲಿರುವ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 20 ಕೋಟಿ ರೂ. ನೆರವು ನೀಡಲಾಗುವುದು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ಮಹನೀಯರ ಕುರಿತು ಕಾನೂನಿನ ದೃಷ್ಟಿಕೋನದಿಂದ ಸಂಶೋಧಿಸುವ ಉದ್ದೇಶದಿಂದ ವಿಜ್ಞಾನೇಶ್ವರ ಅಧ್ಯಯನ ಪೀಠವನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಬಜೆಟ್ನಲ್ಲಿ ಯಡಿಯೂರಪ್ಪ ಪ್ರಕಟಿಸಿದ್ದಾರೆ.ವಿವೇಕಾನಂದ ಯುವ ಕೇಂದ್ರವನ್ನು ಬೆಂಗಳೂರಿನಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.

ರಾಜ್ಯದಲ್ಲಿ  ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಬಲಪಡಿಸಲು,  ಕ್ರೀಡಾಪಟುಗಳಿಗೆ ಉತ್ತಮ ತರಬೇತಿ, ಉತ್ತೇಜನ ನೀಡಲು, ತರಬೇತುದಾರರು ಮತ್ತು ತಾಂತ್ರಿಕ  ಸಿಬ್ಬಂದಿಯ ಕೌಶಲ್ಯ ಅಭಿವೃದ್ಧಿಗೆ ಐದು ಕೋಟಿ ರೂ.ಗಳ ಅನುದಾನ ನೀಡಲಾಗುವುದು. ಅನಂತ  ಕುಮಾರ್ ಪ್ರತಿಷ್ಠಾನದ ವತಿಯಿಂದ ನಾಯಕತ್ವ ನಿರ್ಮಾಣ ಹಾಗೂ ನೀತಿ ನಿರೂಪಣಾ ಸಂಶೋಧನಾ  ಸಂಸ್ಥೆ ಸ್ಥಾಪನೆಗೆ 20 ಕೋಟಿ ರೂ.  ಅನುದಾನ. ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.  ನಿಗದಿ ಪಡಿಸಲಾಗುವುದು. ಸರ್ಕಾರದ ವತಿಯಿಂದ ಜನವರಿ 1 ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಣೆಗೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ನಗರದ ನಾಲ್ಕೂ ದಿಕ್ಕಿನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಕಲಾಕ್ಷೇತ್ರಗಳ ನಿರ್ಮಾಣ ಮಾಡಲಾಗುವುದು ಎಂದು ಯಡಿಯೂರಪ್ಪ ಪ್ರಕಟಿಸಿದರು.ಬೆಂಗಳೂರಿನ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರದೇಶದಲ್ಲಿ 66 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು  ಕೆಂಪೇಗೌಡರ 100 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗುವುದು.

ಸಂತ ಶಿಶುನಾಳ ಶರೀಫರ ಸಮಾಧಿಯಿರುವ ಹಾವೇರಿ ಜಿಲ್ಲೆ ಶಿಶುನಾಳದ ಅಭಿವೃದ್ಧಿಗೆ ಐದು ಕೋಟಿ ರೂ. ಅನುದಾನ ಒದಗಿಸಲಾಗುವುದು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪನವರ ಚಿತ್ರದುರ್ಗದ ಮನೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಐದು ಕೋಟಿ ರೂ. ಅನುದಾನ ನೀಡಲಾಗುವುದ. ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರ ಹುಟ್ಟೂರು, ಹಾಸನ ಜಿಲ್ಲೆಯ ಸಂತೆಶಿವರ ಗ್ರಾಮದ ಅಭಿವೃದ್ಧಿಗೆ ಐದು ಕೋಟಿ ರೂ. ನೀಡಲಾಗುವುದು ಎಂದು ಯಡಿಯೂರಪ್ಪ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸ್ಥಾಪನೆಗೆ 50 ಲಕ್ಷ ರೂ. ಅನುದಾನ ಒದಗಿಸಲಾಗುವುದು. ಚಿತ್ರಸಂತೆ ಕಾರ್ಯಕ್ರಮಕ್ಕೆ ಒಂದು ಕೋಟಿ ರೂ. ನೆರವು ನೀಡಲಾಗುವುದು

. ಬೆಂಗಳೂರಿನಲ್ಲಿ ಒಟ್ಟು 500 ಕೋಟಿ ರೂ.ಗಳ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಜಾಗತಿಕ ಗುಣಮಟ್ಟದ ಫಿಲಂ ಸಿಟಿ ಸ್ಥಾಪನೆ ಮಾಡಲಾಗುವುದು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಐದು ಕೋಟಿ ರೂ.ನೀಡಲಾಗುವುದು. ವಿವಿಧ ಮಠಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಲು ಸರ್ಕಾರದ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಲಾಗಿದೆ.ಭಾರತದ ವಿವಿಧ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಕರ್ನಾಟಕ ಸರ್ಕಾರವು ನಡೆಸುತ್ತಿರುವ ಅತಿಥಿಗೃಹಗಳ ಮೂಲಸೌಕರ್ಯ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಒದಗಿಸಲಾಗುವುದು. ಹಾವೇರಿ ಜಿಲ್ಲೆಯಲ್ಲಿರುವ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ರಾಜ್ಯದ  60 ವರ್ಷ ಮೀರಿದ ಬಡವರಿಗೆ ಉಚಿತವಾಗಿ ರಾಜ್ಯದ ಹಾಗೂ ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರ  ದರ್ಶಿಸಲು “ಜೀವನ ಚೈತ್ರ ಯಾತ್ರೆ” ಯೋಜನೆ ಜಾರಿ ಮಾಡಿ 20 ಕೋಟಿ ರೂ. ಅನುದಾನ ಒದಗಿಸಲಾಗುವುದು. ರಾಜ್ಯದಲ್ಲಿರುವ  25,000ಕ್ಕೂ ಹೆಚ್ಚು ಐತಿಹಾಸಿಕ ಮಹತ್ವವುಳ್ಳ ದೇವಸ್ಥಾನಗಳು, ಪ್ರಾಚೀನ ಸ್ಥಳಗಳು,  ಸ್ಮಾರಕಗಳ ಪುನರುಜ್ಜೀವನಕ್ಕೆ “ಸಂರಕ್ಷಣಾ” ಯೋಜನೆ ಜಾರಿ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ.ಪ್ರವಾಸಿ ಸ್ನೇಹಿ ಯೋಜನೆಗಳನ್ನು ಒಳಗೊಂಡ ಹೊಸ ಪ್ರವಾಸೋದ್ಯಮ ನೀತಿ ಜಾರಿ ಮಾಡಲಾಗುವುದು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ ನೀಡಲಾಗುವುದು. ವೀರ ಮದಕರಿ ನಾಯಕ ಹಾಗೂ ಒನಕೆ ಓಬವ್ವರ ನೆನಪಿಸುವ ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

ಐತಿಹಾಸಿಕ ಪ್ರವಾಸಿ ತಾಣ ಬಾದಾಮಿಯ ಸಮಗ್ರ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.ಕರ್ನಾಟಕ  ಪ್ರವಾಸೋದ್ಯಮ ಕಾರ್ಯಪಡೆಯ ಶಿಫಾರಸುಗಳಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರನ್ನು ಸೆಳೆಯುವ ಜಾಹೀರಾತು ಮತ್ತು ಇತರ ಚಟುವಟಿಕೆಗಳಿಗೆ 100 ಕೋಟಿ ರೂ ಹಾಗೂ  ರಾಜ್ಯದ ಪ್ರವಾಸೋದ್ಯಮದ ಸರ್ವತೋಮುಖ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ ನೀಡಲಾಗುವುದು. ಪ್ರವಾಸಿ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸಲು “ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ” (Global Tourism Investors Meet) ನಡೆಸಲಾಗುವುದು.ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ ಜಲಪಾತ ಮತ್ತು ಇತರ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಒದಗಿಸಿ, ಟೂರಿಸಂ ಸಕ್ರ್ಯೂಟ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿರುವ ಶೋಲಾ ಅರಣ್ಯಗಳ ಸರ್ವೇಕ್ಷಣೆ, ಜೀವ ವೈವಿಧ್ಯ ಸಂರಕ್ಷಣೆಗೆ ಐದು ಕೋಟಿ ರೂ. ಅನುದಾನ, ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿರುವ ಮಿನಿ ಮೃಗಾಲಯ ಉನ್ನತೀಕರಿಸಲು ಐದು ಕೋಟಿ ರೂ.ಗಳ ಅನುದಾನ ಮಾಡಲಾಗುವುದು. ರಾಮನಗರ ಜಿಲ್ಲೆಯ ರಣಹದ್ದು ಧಾಮದಲ್ಲಿ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.ಮಂಗಗಳ ಪುನರ್ವಸತಿಗೆ ಐದು ವರ್ಷಗಳಿಗೆ ಒಟ್ಟಾರೆ 6.25 ಕೋಟಿ ರೂ. ಅನುದಾನ ನೀಡಲಾಗುವುದು,  2020-21ನೇ ಸಾಲಿನಲ್ಲಿ 1.25 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಮೊದಲ ಕಡಲಧಾಮವನ್ನು (Marine Eco Park) ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.