ಬೆಂಗಳೂರು, ಮಾ 11,ಈಗಿನ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ತಡೆಯಲು ಎಲ್ಲಾ ರಾಜಕೀಯ ಪಕ್ಷಗಳು ತಮ್ಮತಮ್ಮ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು ಜೆಡಿಎಸ್ನ ಶ್ರೀಕಂಠೇಗೌಡ ಸಲಹೆ ನೀಡಿದ್ದಾರೆ.ಮೇಲ್ಮನೆಯಲ್ಲಿ ಸದನ ಸಮಾವೇಶಗೊಂಡಾಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಸಂವಿಧಾನದ ಮೇಲಿನ ಮುಂದುವರೆದ ಕಲಾಪವನ್ನು ಕೈಗೊಂಡರು. ಜೆಡಿಎಸ್ನ ಶ್ರೀಕಂಠೇಗೌಡ ಮಾತನಾಡಿ, ನಾವೆಲ್ಲರೂ ಇಂದು ಭ್ರಷ್ಟಾಚಾರರಹಿತ ಚುನಾವಣೆ ನಡೆಸಲು ಸಾಧ್ಯವೇ ಎಂಬುದನ್ನು ಪರಿಗಣಿಸಬೇಕು. ಮುಂದಿನ ಪೀಳಿಗೆಗೆ ಯಾವ ಸಂದೇಶ ಕೊಡಬೇಕೆಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.ನಮಗಿಂತಲೂ ತಡವಾಗಿ ಸ್ವಾತಂತ್ರ್ಯ ಪಡೆದ ಚೀನಾ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರೆದು ಅಭಿವೃದ್ಧಿಹೊಂದಿದ ಮುಂಚೂಣಿ ದೇಶವಾಗಿದೆ. ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಬಾಂಗ್ಲಾದಲ್ಲಿ ಬಡತನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ನಮ್ಮಲ್ಲಿ ಏಕೆ ಇದು ಸಾಧ್ಯವಾಗಿಲ್ಲ ? ಎಂದು ಪ್ರಶ್ನಿಸಿದರು.ಕರ್ನಾಟಕದಲ್ಲಿ 1.20 ಕೋಟಿ ದೇಶದಲ್ಲಿ 30 ಕೋಟಿ ಜನತೆ ಈಗಲೂ ಬಡತನ ರೇಖೆಗಿಂತಲೂ ಕೆಳಗಿದ್ದಾರೆ.
ಒಪ್ಪತ್ತಿನ ಊಟಕ್ಕೂ ಸಹ ಅವರು ಪರದಾಡುತ್ತಿದ್ದಾರೆ. ಇದಕ್ಕೆ ನಮ್ಮ ವ್ಯವಸ್ಥೆಯೊಳಗೆ ಹೆಚ್ಚುತ್ತಿರುವ ಭ್ರಷ್ಟಾಚಾರವೇ ಮೂಲ ಕಾರಣ ಎಂದರು.ಮೈಸೂರಿನ ಅಕ್ಷಯ ಫೌಂಡೇಷನ್ ಎಂಬ ಸರ್ಕಾರೇತರ ಸಂಘ ಸಂಸ್ಥೆ ಖರ್ಚಾಗದೇ ಉಳಿದ ಆಹಾರವನ್ನು ಶೇಖರಿಸಿ ಕೊಳಗೇರಿ ಮತ್ತಿತರ ಕಡೆ ವಿತರಿಸುತ್ತದೆ .ಈ ವಾಹನದ ಬರುವಿಕೆಗಾಗಿ ಸಾವಿರಾರು ಜನ ನಿರೀಕ್ಷೆಯಲ್ಲಿರುತ್ತಾರೆ. ಅಂತಹ ಸಂಸ್ಥೆ ನಮಗೊಂದು ವಾಹನ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೆ ಅದೇ ಜಿಲ್ಲಾಧಿಕಾರಿ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಇಲಾಖೆಗೆ ಕೊಡಲು ಶಿಫಾರಸು ಮಾಡುತ್ತಾರೆ. ಇದು ನಮ್ಮ ವ್ಯವಸ್ಥೆ. ಬರೀ ಭಾಷಣದಲ್ಲಿ ಮಾತ್ರ ಭ್ರಷ್ಟಾಚಾರ ನಿರ್ಮೂಲನದ ಬಗ್ಗೆ ಮಾತನಾಡಿ, ಅದೇ ಚುನಾವಣೆ ಬಂದಾಗ ಯಾವ ರೀತಿ ವಾಮಮಾರ್ಗದಲ್ಲಿ ಗೆಲುವು ಸಾಧಿಸಬಹುದೆಂದು ಯೋಚಿಸುತ್ತೇವೆ. ಹೀಗೆ ಆದರೆ ಅಭಿವೃದ್ಧಿ ಮರೀಚಿಕೆಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ಕರಡು ಸಮಿತಿಯಲ್ಲಿ ನಿಜಕ್ಕೂ ನಿರ್ಣಾಯಕ ಪಾತ್ರವಹಿಸಿದ್ದಾರೆ. ವಿಶ್ವದ 176 ದೇಶಗಳಲ್ಲಿ ಸಂವಿಧಾನವಿದೆ. ಯಾವ ದೇಶ ಯಾವ ಸ್ವರೂಪದ ಸರ್ಕಾರ ಹೊಂದಿರಬೇಕು, ಹೇಗೆ ಆಡಳಿತ ನಡೆಸಬೇಕೆಂಬ ಕಾನೂನಿನ ಕೋಶ ಅದು. ಸಂಸದೀಯ ಆಡಳಿತ ಹೊಂದಿರುವ ಶ್ರೇಷ್ಠವಾದ ಸಂವಿಧಾನ ಹೊಂದಿರುವ ದೇಶ ನಮ್ಮದು. ಹತ್ತಾರು ರಾಷ್ಟ್ರಗಳ ಸಂವಿಧಾನಗಳ ತೌಲನಿಕ ಅಧ್ಯಯನದ ಮೇಲೆಯೇ ನಮ್ಮ ಸಂವಿಧಾನ ರಚನೆಯಾಗಿದ್ದರೂ ಅನೇಕ ದೇಶಗಳ ಸಂವಿಧಾನಕ್ಕೆ ನಮ್ಮ ಸಂವಿಧಾನವೇ ಮೂಲ. ಅಂಬೇಡ್ಕರ್ ಮತ್ತು ಗಾಂಧೀಜಿ ನಮ್ಮ ದೇಶದ ಎಂದಿಗೂ ಮರೆಯಲಾರದ ವ್ಯಕ್ತಿಗಳು. ಸಂವಿಧಾನ ಎಂಬ ಅಸ್ತ್ರದೊಂದಿಗೆ ಭಾರತದಲ್ಲಿ ಸುಸಜ್ಜಿತ ಆಡಳಿತಕ್ಕೆ ಅಂಬೇಡ್ಕರ್ ನಾಂದಿ ಹಾಡಿದ್ದರು ಎಂದರು.ಸಂವಿಧಾನ ಬಂದು ಏಳು ದಶಕ ಕಳೆದರೂ ನಾವಿನ್ನೂ ಅನೇಕ ಕ್ಷೇತ್ರಗಳಲ್ಲಿ ಹಿಂದುಳಿದಿದ್ದೇವೆ. ಯುವಕರಿಗೆ ಉದ್ಯೋಗ ಕೊಡುತ್ತಿಲ್ಲ. ಆಹಾರ ಭದ್ರತಾ ಕಾಯಿದೆ ಜಾರಿಯಾದರೂ ಸರಿಯಾಗಿ ಅನುಷ್ಠನಾವಾಗಿಲ್ಲ. ಇದಕ್ಕೆಲ್ಲ ನಮ್ಮ ವ್ಯವಸ್ಥೆಯೇ ಕಾರಣ ಎಂದು ದೂರಿದಾಗ ಇವರ ಹೇಳಿಕೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಕ್ಷೇಪವ್ಯಕ್ತಪಡಿಸಿದರು.
ಭಾರತ ಅಭಿವೃದ್ಧಿ ಹೊಂದುತ್ತಿಲ್ಲ ಎನ್ನುವುದು ಸರಿಯಲ್ಲ. ಜನಸಂಖ್ಯೆಯೆ ಹೆಚ್ಚಳದಿಂದ ಸಮಸ್ಯೆಗಳು ಹೆಚ್ಚಾಗಿವೆ. ಐಟಿಬಿಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾವು ವಿಶ್ವಕ್ಕೆ ಮಾದರಿಯಾಗಿದ್ದೇವೆ. ಇಂದು ಭಾರತ ಬೇರೆ ದೇಶಗಳಿಗೆ ಆಹಾರ ಧಾನ್ಯ ಉಚಿತವಾಗಿ ಕೊಡುವಷ್ಟು ಎತ್ತರಕ್ಕೆ ಬೆಳೆದಿರುವುದು ಅಭಿವೃದ್ಧಿಯಲ್ಲವೇ? . ನಮ್ಮ ಊರಿನಲ್ಲಿ ಜನಸಂಖ್ಯೆ ಕಡಿಮೆಯಿರುವುದರಿಂದ ಅಲ್ಲಿ ಅಪರಾಧ ಪ್ರಕರಣಗಳು ಇಲ್ಲ. ಆದರೆ ಬೆಂಗಳೂರು ಸೇರಿದಂತೆ ವಿವಿಧೆಡೆ ಜನಸಂಖ್ಯೆ ಹೆಚ್ಚಿರುವೆಡೆ ಸಮಸ್ಯೆ ಹೆಚ್ಚಿದೆ. ಲಾಲ್ ಬಹದ್ದೂರು ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಸೋಮವಾರ ತಾವು ಜನರಿಗೆ ಆಹಾರ ನೀಡಲೆಂದು ಉಪವಾಸ ಕೈಗೊಂಡರು. ಇವರಿಂದ ಪ್ರೇರಿತರಾಗಿ ಇನ್ನು ಹಲವು ತೀರ್ಮಾನ ಕೈಗೊಂಡ ಪರಿಣಾಮ ಆಹಾರ ಧಾನ್ಯ ಉಳಿದು ಬಡವರಿಗೆ ಆಹಾರ ದೊರೆಯಿತು. ಭಾರತ ಅಭಿವೃದ್ಧಿ ಹೊಂದಿಲ್ಲ ಎನ್ನುವುದು ಸರಿಯಲ್ಲ. ಅಂಬೇಡ್ಕರ್ ಮೊದಲ ಬಾರಿಗೆ ಸಂವಿಧಾನ ತಿದ್ದುಪಡಿಗೆ ಮುಂದಾದಾಗ ಅವರೇಕೆ ಕಣ್ಣೀರು ಹಾಕಿದರು ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಿದರು.