ಸಂವಿಧಾನ ರಚನೆಯ ಸಕಲ ಗೌರವವೂ ಡಾ.ಬಿ.ಆರ್.ಅಂಬೇಡ್ಕರ್ ಅವರೊಬ್ಬರಿಗೇ ಸಲ್ಲಬೇಕು: ವಿವಾದಕ್ಕೆ ತೆರೆ ಎಳೆದ ಯಡಿಯೂರಪ್ಪ

ಬೆಂಗಳೂರು, ಮಾ.4, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ ಸಂವಿಧಾನ ಕರಡು ಸಿದ್ಧಪಡಿಸಿದ್ದರು. ದಮನಿತರು, ತುಳಿತಕ್ಕೆ ಒಳಗಾದವರಿಗೆ ನೆರವಾಗಬೇಕು, ಅವರನ್ನು ಮೇಲೆತ್ತಬೇಕು ಎಂಬುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು,. ಸಂವಿಧಾನ ರಚನೆಯ ಸಕಲ ಗೌರವವೂ ಡಾ.ಬಿ.ಆರ್.ಅಂಬೇಡ್ಕರ್ ಅವರೊಬ್ಬರಿಗೇ ಸಲ್ಲಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಸಂವಿಧಾನ ಮೂಲ ರಚನೆ ಯಾರು ಮಾಡಿದರು ಎಂಬ ವಿಷಯದಲ್ಲಿ ನಡೆಯುತ್ತಿದ್ದ ಚರ್ಚೆಗೆ ತೆರೆ ಎಳೆದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.ಸಂವಿಧಾನ ಕುರಿತ ವಿಶೇಷ ಚರ್ಚೆಯ ಎರಡನೇ ದಿನದ ಅಧಿವೇಶನದಲ್ಲಿಂದು ಸಂವಿಧಾನ ರಚನೆ, ಅದರ ಉದ್ದೇಶ, ಧ್ಯೇಯೋದ್ದೇಶಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.ಆರಂಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸಂವಿಧಾನ ರಚನೆಗೆ ನಮ್ಮ ದೇಶದ ಉಪನಿಷತ್ಗಳು, ವೇದಗಳು ಪ್ರೇರಣೆಯಾಗಿವೆ. ಆಡಳಿತ ಹೇಗೆ ನಡೆಸಬೇಕು ಎಂಬುದನ್ನು ವೇದಗಳಲ್ಲಿ ತಿಳಿಸಲಾಗಿದೆ. ನಮ್ಮ ದೇಶದ ಸಂವಿಧಾನ ಅತ್ಯುನ್ನತವಾಗಿದೆ ಎಂದರು.ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ಮಾತನಾಡಿ, ಸ್ಪೀಕರ್ ಅವರು ನಿನ್ನೆ ಸಂವಿಧಾನ ಕುರಿತು ಸುದೀರ್ಘ ಭಾಷಣ ಮಾಡಿದ್ದಾರೆ. ಆದರೆ ಅವರ ಭಾಷಣದ 7ನೇ ಪುಟದಲ್ಲಿ " ....ಮೂಲತಃ ಮಂಗಳೂರಿನವರಾದ ಬಿ.ಎನ್. ರಾವ್ ಅವರ ಕೊಡುಗೆ ಅಪಾರವಾದುದು. ಅವರು ಭಾರತ ಸಂವಿಧಾನ ರಚನಾ ಸಭೆಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು ಹಾಗೂ ಶ್ರೀಯುತರು ರಚಿಸಿದ ಸಂವಿಧಾನ ಮೂಲ ಕರಡು ಪ್ರತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದ ಕರಡು ಸಮಿತಿಗೆ ಸಲ್ಲಿಸಲಾಗಿತ್ತು. ಈ ಮೂಲ ಕರಡನ್ನು ರಚನಾ ಸಭೆಯಲ್ಲಿ ಚರ್ಚಿಸಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತ್ವತ್ವದಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿ ಭಾರತೀಯ ಸರ್ವತೋಮುಖ ಅಭಿವೃದ್ಧಿಗಾಗಿ ಸಮಗ್ರವಾದ ಹಾಗೂ ಸಮರ್ಥವಾದ ಸಂವಿಧಾನವನ್ನು ರಚಿಸಿದ್ದಾರೆ...... ಎಂದು ಹೇಳಲಾಗಿದೆ. ಆದರೆ ಇದು ಸರಿಯಲ್ಲ. ಡಾ.ಬಿ,ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದರು. ಯಾವುದೇ ಮೂಲ ಕರಡು ಇರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಸ್ಪೀಕರ್ ಅವರು ಸಂವಿಧಾನದ ವಿಷಯದ ಕುರಿತು ಭಾಷಣ ಮಾಡುವಾಗ ಕೆಲವು ಪ್ರಮುಖ ಅಂಶಗಳನ್ನು ಕೈಬಿಟ್ಟಿದ್ದಾರೆ. ಕಾಂಗ್ರೆಸ್, ಸ್ವಾತಂತ್ರ್ಯ ಚಳವಳಿ, ಸ್ವಾತಂತ್ರ್ಯ ಹೋರಾಟಗಾರರನ್ನು ಭಾಷಣದಲ್ಲಿ ಪ್ರಸ್ತಾಪಿಸಿಲ್ಲ. ಸ್ಪೀಕರ್ ಅವರ ಪೂರ್ವಾಶ್ರಮದಿಂದ ಪ್ರಭಾವಿತಗೊಂಡಿರುವುದು ಭಾಷಣದಲ್ಲಿ ಸ್ಪಷ್ಟಗೊಂಡಿದೆ ಎಂದು ಎಚ್.ಕೆ.ಪಾಟೀಲ್ ಆಕ್ಷೇಪಿಸಿದರು.ಇದಕ್ಕೆ ಸ್ಪಷ್ಟನೆ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಉದ್ದೇಶಪೂರ್ವಕವಾಗಿ ಯಾವುದೇ ಅಂಶಗಳನ್ನು ಕೈಬಿಟ್ಟಿಲ್ಲ. ಆದರೆ ಸ್ಥಳದ ಅಭಾವದಿಂದ ಕೆಲವು ಅಂಶಗಳು ಕೈಬಿಟ್ಟಿರಬಹುದು. ತಪ್ಪಾಗಿದ್ದರೆ ತಿಳಿಸಿ, ಸರಿಪಡಿಸಿಕೊಳ್ಳಲು ಸಿದ್ಧನಿದ್ದೇನೆ ಎಂದು ಸಮಜಾಯಿಷಿ ನೀಡಿದರು.ಇತಹಾಸ ತಿರುಚುವ ಪ್ರಯತ್ನವನ್ನು ಯಾರೂ ಮಾಡಬಾರದು. ನಮ್ಮ ಮುಂದಿನ ಪೀಳಿಗೆ ಇದನ್ನೇ ಇತಿಹಾಸ ಎಂದು ತಿಳಿದುಕೊಳ್ಳಬಾರದು, ಆದ್ದರಿಂದ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಎಂದು ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು.ಮಧ್ಯ ಪ್ರವೇಶಿಸಿ ಮಾತನಾಡಿದ ಕಾಂಗ್ರೆಸ್ನ ಪ್ರಿಯಾಂಕ್ ಖರ್ಗೆ, ಸಂದರ್ಶನವೊಂದರಲ್ಲಿ ಬಿ.ಎನ್.ರಾವ್ ಅವರು ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವ ಹೊಂದಿದ್ದರು. ಹಾಗಾಗಿ ಅವರು ಬಿ.ಆರ್.ಅಂಬೇಡ್ಕರ್ ಅವರಿಗೆ ಭಾಷಾಂತರಕಾರಾಗಿ ಕೆಲಸ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ ಅಂಬೇಡ್ಕರ್ ಸ್ವತಃ ಆಕ್ಸ್ಫರ್ಡ್ ನಲ್ಲಿ ಕಲಿತು ಬಂದವರು. ಇಂಗ್ಲೀಷ್ನಲ್ಲಿ ಪ್ರಭುತ್ವ ಸಾಧಿಸಿದ್ದರು. ಅವರಿಗೆ ಭಾಷಾಂತರಕಾರರ ಅಗತ್ಯವೇ ಇರಲಿಲ್ಲ. ಸಂವಿಧಾನ ರಚನೆಯ ಸಂಪೂರ್ಣ ಗೌರವ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಪ್ರತಿಪಾದಿಸಿದರು.ಈ ವಿಷಯ ವಿವಾದಕ್ಕೆ ಕಾರಣವಾಗಬಹುದು ಎಂಬ ಆತಂಕದಿಂದ ಎದ್ದು ನಿಂತ ಬಿ.ಎಸ್.ಯಡಿಯೂರಪ್ಪ, ಸಂವಿಧಾನ ರಚನೆಯ ಸಕಲ ಗೌರವವೂ ಡಾ.ಬಿ.ಆರ್.ಅಂಬೇಡ್ಕರ್ ಅವರೊಬ್ಬರಿಗೇ ಸಲ್ಲಬೇಕು ಎಂದು ಹೇಳುವ ಮೂಲಕ ವಿವಾದವಾಗದಂತೆ ನೋಡಿಕೊಂಡು ಚಾಣಾಕ್ಷತನ ಮೆರೆದರು.