ಬೆಂಗಳೂರು,ಮಾ.5 ನಿರೀಕ್ಷೆಯಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ಆಯವ್ಯಯದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಹಲವು ಹೊಸ ಯೋಜನೆಯನ್ನು ಘೋಷಿಸಿ, ಒಟ್ಟಾರೆ ಈ ಕ್ಷೇತ್ರಕ್ಕೆ 32,259 ಕೋಟಿ ರೂ. ನಿಗದಿಪಡಿಸಿದ್ದಾರೆ.ವಿಧಾನಸಭೆಯಲ್ಲಿಂದು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿ, ನಮ್ಮ ಸರ್ಕಾರ ನಾಡಿನ ಜನರ ಶ್ರೇಯೋಭಿವೃದ್ಧಿಗಾಗಿ ಜಾರಿಯಲ್ಲಿರುವ ಪ್ರಮುಖ ಯೋಜನೆಗಳನ್ನು ಮುಂದುವರಿಸಲಿದೆ. ಭಾಗ್ಯಲಕ್ಷ್ಮೀ ಯೋಜನೆ, ಶಾಲಾ ಮಕ್ಕಳಿಗೆ ಬೈಸಿಕಲ್ ಯೋಜನೆ ಮುಂತಾದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಯೋಜನೆಗಳಿಗೆ ತಿಲಾಂಜಲಿ ನೀಡಲಾಗುತ್ತದೆ ಎಂಬ ಆತಂಕ ದೂರ ಮಾಡಿದ್ದಾರೆ.ನೀರಿನ ಭದ್ರತೆ, ಭೂ ಸಂಚಯ ಮತ್ತು ಸಾಮೂಹಿಕ ಕೃಷಿ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆಗೆ ಉತ್ತೇಜನ ನೀಡಲು ಮತ್ತು ಕೃಷಿ ಹಾಗೂ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಅನುಷ್ಠಾನಗೊಳಿಸಲಾಗುವುದು. “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ” ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4000 ರೂ. ಹೆಚ್ಚುವರಿ ನೆರವು ನೀಡುವ ಯೋಜನೆಯನ್ನು ಮುಂದುವರೆಸಲು 2600 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸಲಾಗುವುದು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ರಾಜ್ಯದ ವಿಮಾ ಕಂತಿನ ಪಾಲು ಬಿಡುಗಡೆಗೆ 900 ಕೋಟಿ ರೂ.ಒದಗಿಸಲಾಗಿದೆ. ರೈತ ಸಿರಿ ಯೋಜನೆಯಡಿ ಟೆಫ್, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳ ಸೇರ್ಪಡೆಗೊಳಿಸಲಾಗಿದೆ. ಮಣ್ಣು, ನೀರು ಪರೀಕ್ಷೆ ಮತ್ತು ರೈತರಿಗೆ ತಾಂತ್ರಿಕ ನೆರವು ನೀಡಲು “ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್” ಪ್ರಾರಂಭ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ. ಅನುದಾನ ನೀಡಲಾಗುವುದು. ರೈತರಿಗೆ ಪ್ರದೇಶವಾರು ಸೂಕ್ತ ಬೆಳೆಯನ್ನು ಬೆಳೆಯಲು, ಅಗತ್ಯ ಬೀಜಗಳು, ರಸಗೊಬ್ಬರಗಳು, ಸಣ್ಣ ಪೌಷ್ಟಿಕಾಂಶಗಳ ಬಳಕೆಗೆ ಮಾರ್ಗದರ್ಶನ ನೀಡಲು ಹೊಸ ನೀತಿ ಪ್ರಕಟಿಸಲಾಗುವುದು. ರೈತರ ಸಾಮರ್ಥ್ಯ ಅಭಿವೃದ್ಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳಿಗಾಗಿ 40 ಪ್ರಾತ್ಯಕ್ಷಿಕೆ ಕ್ಷೇತ್ರಗಳ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ತಿಳಿಸಿದರು.ಕೃಷಿ ಮಹಾಮಂಡಳಗಳು, ರಫ್ತುದಾರರು, ಆಹಾರ ಸಂಸ್ಕರಣಾ ಸಂಸ್ಥೆಗಳು ಮತ್ತು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್ಗಳ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಕ್ರಮ ಕೈಗೊಳ್ಳಲಾಗುವುದು. ವಿಶ್ವಬ್ಯಾಂಕ್ ಪ್ರಾಯೋಜಿತ ಸುಜಲಾ-III ಯೋಜನೆಯನ್ನು ಜಾರಿಗೊಳಿಸಿರುವ 12 ಮಳೆ ಆಶ್ರಿತ ಜಿಲ್ಲೆಗಳ 2500 ಗ್ರಾಮಗಳ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಭೂ ಸಂಪನ್ಮೂಲ ಯಾದಿಯ ತರಬೇತಿ ನೀಡಿ, ಕಾರ್ಡ್ ವಿತರಿಸಲು 10 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.ವಿಶ್ವಬ್ಯಾಂಕ್ ಅನುದಾನಿತ ಹೊಸ ಬಹು-ರಾಜ್ಯ ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ (REWARD) ಮುಂದಿನ ಆರು ವರ್ಷದ ಅವಧಿಗೆ ಕರ್ನಾಟಕ ರಾಜ್ಯ ಭಾಗಿಯಾಗಲಿದ್ದು, ಅಂತರ್ಜಲ ಸ್ಥಿತಿ ಗಂಭೀರವಾಗಿರುವ 76 ತಾಲ್ಲೂಕುಗಳಲ್ಲಿ ಮುಂದಿನ ಮೂರು ವರ್ಷದಲ್ಲಿ ನಾಲ್ಕು ಲಕ್ಷ ಹೆಕ್ಟೇರ್ನಲ್ಲಿ 810 ಅತಿ ಸಣ್ಣ ಜಲಾನಯನಗಳಲ್ಲಿ ಜಲಾಮೃತ ಯೋಜನೆ ಅನುಷ್ಠಾನಗೊಳಿಸಲಾಗುವುದು. ಸಾಗರದ ಇರುವಕ್ಕಿ ಗ್ರಾಮದಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಬಾಕಿ ಕಾಮಗಾರಿ ಪೂರ್ಣಗೊಳಿಸಿ, ತರಗತಿ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.ತೋಟಗಾರಿಕೆ ಉತ್ಪನ್ನಗಳ ಸಮರ್ಪಕ ಕೊಯ್ಲೋತ್ತರ ನಿರ್ವಹಣೆಗೆ ವಿವಿಧ ಜಿಲ್ಲೆಗಳ 10 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ 5000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹಗಳ ನಿರ್ಮಾಣ ಮಾಡಲಾಗುವುದು.
ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪ್ರತಿ ಹೆಕ್ಟೇರಿಗೆ 5000 ರೂ.ಗಳಂತೆ ಗರಿಷ್ಠ 10,000 ರೂ. ನೆರವು ನೀಡಲಾಗುವುದು. ಹಾಪ್ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕೊಳೆತು ಹೋಗಬಹುದಾದ ಹೂವು, ಹಣ್ಣು ತರಕಾರಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬಯಿ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲ್ ಯೋಜನೆಯ ಸೌಲಭ್ಯದ ಬಳಕೆ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.ಸೂಕ್ಷ್ಮ ನೀರಾವರಿಗೆ 627 ಕೋಟಿ ರೂ. ಅನುದಾನ ನೀಡಲಾಗುವುದು. ರಾಜ್ಯದ ಪ್ರತಿ ಗ್ರಾಮದಲ್ಲಿ “ಜಲಗ್ರಾಮ ಕ್ಯಾಲೆಂಡರ್” ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕರಾವಳಿ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ “ಕಿಂಡಿ ಅಣೆಕಟ್ಟು ಯೋಜನೆ”ಗಳ (Vented Dams) ವ್ಯಾಪಕ ಅನುಷ್ಠಾನಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು. ಅಟಲ್ ಭೂ-ಜಲ ಯೋಜನೆಯಡಿ 1202 ಕೋಟಿ ರೂ.ಗಳನ್ನು ಬಳಸಿಕೊಂಡು ರಾಜ್ಯದ ಆಯ್ದ ಜಿಲ್ಲೆಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.ರಾಜ್ಯದ ಬೃಹತ್ ನೀರಾವರಿ ಯೋಜನೆಯಡಿಯಲ್ಲಿನ ಅಚ್ಚುಕಟ್ಟು ಪ್ರದೇಶಗಳಲ್ಲಿ Flood Irrigation ಪದ್ಧತಿಯನ್ನು ಇಸ್ರೇಲ್ ಮಾದರಿಯಲ್ಲಿ ಸೂಕ್ಷ್ಮ ನೀರಾವರಿಗೆ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದು. ಜಲಸಂಪನ್ಮೂಲ ಇಲಾಖೆಯ ಮೂಲಕ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 500 ಕೋಟಿ ರೂ. ಅನುದಾನ ನೀಡಲಾಗುವುದು. ‘ಎತ್ತಿನಹೊಳೆ ಯೋಜನೆ’ಗೆ 1500 ಕೋಟಿ ರೂ. ಅನುದಾನ; ಮೊದಲನೆಯ ಹಂತದ Lift component ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.
ಹೂಳು ತುಂಬಿರುವ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಪರ್ಯಾಯ ಹರಿವು ನಾಲೆ ಮೂಲಕ ನವಲೆ ಹತ್ತಿರ ಸಮತೋಲನಾ ಜಲಾಶಯ ನಿರ್ಮಾಣದ ವಿಸ್ತøತ ಯೋಜನಾ ವರದಿ ತಯಾರಿಕೆಗೆ 20 ಕೋಟಿ ರೂ. ಅನುದಾನ ನೀಡಲಾಗುವುದು. ರಾಜ್ಯದಲ್ಲಿ 5000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಏತ ನೀರಾವರಿ ಯೋಜನೆಗಳ ಅನುಷ್ಠಾನಗೊಳಿಸಲಾಗುವುದು. ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಗೆ ತಿಂತಿಣಿ ಬ್ರಿಡ್ಜ್ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಾಣ- ವಿಸ್ತøತ ಯೋಜನಾ ವರದಿ ತಯಾರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ.ರಾಮನಗರ ಜಿಲ್ಲೆಯ ಕಣ್ವ ಫಾರ್ಮ್ನಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ರೇಷ್ಮೆ ಹುಳು ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಪಶುಸಂಗೋಪನಾ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಸಮೀಕ್ಷೆ ನಡೆಸಿ, ಸಮಗ್ರ ನೀತಿ ರೂಪಿಸಲಾಗುವುದು. ವಿದೇಶಿ ತಳಿಯ ಹಂದಿಗಳನ್ನು ಆಮದು ಮಾಡಿಕೊಳ್ಳುವ “ಸಮಗ್ರ ವರಾಹ ಅಭಿವೃದ್ಧಿ” ಯೋಜನೆಗೆ ಐದು ಕೋಟಿ ರೂ. ಅನುದಾನ ಒದಗಿಸಲಾಗುವುದು.
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕುಕ್ಕುಟ ತ್ಯಾಜ್ಯ ಸಂಸ್ಕರಣೆ ಮತ್ತು ಮೌಲ್ಯವರ್ಧನ ಕೇಂದ್ರ ಸ್ಥಾಪಿಸಲಾಗುವುದು. ಲಿಂಗ ನಿರ್ಧಾರಿತ ವೀರ್ಯನಳಿಕೆಗಳಿಂದ ಕೃತಕ ಗರ್ಭಧಾರಣೆ ಮೂಲಕ ಹೆಣ್ಣು ಕರುಗಳ ಜನನ ಹೆಚ್ಚಿಸಲು ಎರಡು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆಯ ಉತ್ತೇಜನಕ್ಕೆ 1.5 ಕೋಟಿ ರೂ. ವೆಚ್ಚದಲ್ಲಿ “ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ” ಜಾರಿ ಮಾಡಲಾಗುವುದು. “ಮಹಿಳಾ ಮೀನುಗಾರರ ಸಬಲೀಕರಣ” ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ ನೀಡಲಾಗುವುದು. ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಮಂಗಳೂರು ತಾಲ್ಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ ಮಾಡಲಾಗುವುದು.
ಉಡುಪಿ ಜಿಲ್ಲೆಯ ಹೆಜಮಾಡಿಕೋಡಿಯಲ್ಲಿ ಪರಿಷ್ಕೃತ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ ಮಾಡಲಾಗುವುದು. ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದರು.ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ನಾಲ್ಕು ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ ಐದು ಕೋಟಿ ರೂ., ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 85 ಕೋಟಿ ರೂ. ಅನುದಾನ, ಕೊಡೇರಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಎರಡು ಕೋಟಿ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (DCC), ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (PCARD) ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (PACS) ಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ. 466 ಕೋಟಿ ರೂ. ನೆರವು. 92 ಸಾವಿರ ರೈತರಿಗೆ ಪ್ರಯೋಜನವಾಗಲಿದೆ. ಅಡಿಕೆ ಬೆಳೆಗಾರರ ಪ್ರಾಥಮಿಕ/ ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.5 ರಷ್ಟು ಬಡ್ಡಿ ವಿನಾಯಿತಿ ನೀಡಲಾಗುವುದು. ಕೃಷಿ ಮೌಲ್ಯ ಸರಪಳಿಯ ಅಭಿವೃದ್ಧಿಗಾಗಿ 100 FPO ರಚನೆ, FPO ಗಳ ಮೂಲಕ ಮೌಲ್ಯ ಸರಪಳಿ ಅಭಿವೃದ್ಧಿಗೆ ಎಂಟು ಕೋಟಿ ರೂ. ನೆರವು ನೀಡಲಾಗುವುದು. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿಗಾಗಿ ಸ್ಥಾಪಿಸಲಾಗಿರುವ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿಯ ಮೊತ್ತ ಅಗತ್ಯಕ್ಕೆ ಅನುಗುಣವಾಗಿ 2000 ಕೋಟಿ ರೂ. ವರೆಗೆ ಹೆಚ್ಚಳ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ.