ಕುಣಿಗಲ್ ಸಮೀಪ ಭೀಕರ ಅಪಘಾತ: ಮಗು ಸೇರಿ 13 ಮಂದಿ ದಾರುಣ ಸಾವು

ತುಮಕೂರು, ಮಾ.6 ,ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು  ಪಲ್ಟಿಯಾದ ಬಳಿಕ ಆ ಕಾರಿಗೆ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಕಾರು  ಡಿಕ್ಕಿಯಾದ ಪರಿಣಾಮ ಎರಡೂ ಕಾರುಗಳಲ್ಲಿದ್ದ 13 ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಬ್ಯಾಲದಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಸಂಭವಿಸಿದೆ.ತಮಿಳುನಾಡು ಮೂಲದ ಚಾವರ್ಲೆಟ್ ಟವೇರಾ ಕಾರಿನ ಪ್ರಯಾಣಿಕರು ಧರ್ಮಸ್ಥಳಕ್ಕೆ ಹಿಂದಿರುಗಿ ವಾಪಾಸ್ ಬರುತ್ತಿದ್ದಾಗ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಈ ಕಾರಿಗೆ ಡಿಕ್ಕಿ ಹೊಡೆದ ಬ್ರೀಜಾ ಕಾರಿನಲ್ಲಿ ಬೆಂಗಳೂರಿನ ದೊಡ್ಡ ಆಲದಮರ ಮೂಲದ ನಾಲ್ವರು ಯುವಕರಿದ್ದರು ಎಂದು ತಿಳಿದು ಬಂದಿದೆ.ತಮಿಳುನಾಡಿನ ಸೀಕನಪಲ್ಲಿ ನಿವಾಸಿಗಳಾದ ಸೌಂದರ್ ರಾಜ್, ತ್ರಿಶನ್ಯ, ಮಂಜುನಾಥ್, ತನುಜಾ, ಚೇತನ್, ಗೌರಮ್ಮ, ರತ್ನಮ್ಮ, ಸರಳ, ಚಾವರ್ಲೆಟ್ ಕಾರು ಚಾಲಕ ರಾಜೇಂದ್ರ, ಬ್ರಿಜ್ಜಾ ಕಾರು ಚಾಲಕ ಬೆಂಗಳೂರಿನ ಹುಣಸೇಮಾರನಹಳ್ಳಿ ನಿವಾಸಿ ಲಕ್ಷ್ಮೀ ಕಾಂತ್, ಗೇರುಪಾಳ್ಯ ನಿವಾಸಿ ಸಂದೀಪ್, ರಾಮೋಹಳ್ಳಿ ನಿವಾಸಿ ಮಧು ಮೃತಪಟ್ಟವರು.ಘಟನೆಯಲ್ಲಿ ಕೆಂಗೇರಿಯ ರಾಮೋಹಳ್ಳೀ ನಿವಾಸಿ ಪ್ರಕಾಶ್, ತಮಿಳುನಾಡಿನ ಸೀಕನಪಲ್ಲಿಯ ನಿವಾಸಿಗಳಾದ ಶ್ವೇತಾ, ಅರ್ಶಿತಾ, ಮಾಲ್ಯಶ್ರೀ, ಗಂಗೋತ್ರಿ ಗಾಯಗೊಂಡವರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ನಜ್ಜುಗುಜ್ಜಾಗಿದ್ದು, ತಮಿಳುನಾಡಿನ ಟವೇರಾ ಕಾರಿನಲ್ಲಿ 12 ಜನರಿದ್ದರು. ಅವರ ಪೈಕಿ 10 ಜನ ಸಾವನ್ನಪ್ಪಿದ್ದಾರೆ.

ಗಾಯಾಳುಗಳನ್ನು ಕುಣಿಗಲ್ ಮತ್ತು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ನಾಲ್ವರು ಗಾಯಾಳುಗಳಲ್ಲಿ  ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಬಗ್ಗೆ  ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.ಮೃತರ ಕುಟುಂಬಸ್ಥರಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಅವರು ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಕುಣಿಗಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ಮುಂಭಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.