ಮಂಗಳೂರಿನಲ್ಲಿ ನಾಳೆಯಿಂದ ಎಬಿವಿಪಿ ರಾಜ್ಯ ಮಟ್ಟದ ಸಮಾವೇಶ

ಮಂಗಳೂರು, ಫೆ 6 :    ಶುಕ್ರವಾರದಿಂದ ಇಲ್ಲಿ ಆರಂಭವಾಗಲಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಮೂರು ದಿನಗಳ ರಾಜ್ಯಮಟ್ಟದ ಸಮಾವೇಶದಲ್ಲಿ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ. 

ಕುಡ್ಮುಲ್ ರಂಗ ರಾವ್ ಟೌನ್ ಹಾಲ್‌ನಲ್ಲಿ ನಲ್ಲಿ ಆಯೋಜಿಸಲಾಗಿರುವ ಸಮಾವೇಶವನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಉದ್ಘಾಟಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ. ನಾಯಕ್ ಮತ್ತು ಕಾರ್ಯದರ್ಶಿ ಶಾಂತರಾಮ ಶೆಟ್ಟಿ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.   

ಎಬಿವಿಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಮತ್ತು ನಾಗಾಲ್ಯಾಂಡ್ ಮಾಜಿ ರಾಜ್ಯಪಾಲರಾದ ಪಿ.ಬಿ. ಆಚಾರ್ಯ, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪಿ.ಎಸ್. ಯಾದಪದಿತಾಯ, ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಶ್ ಚೌಹಾನ್ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಶೈಕ್ಷಣಿಕ ವಲಯದ ಭಾಗೀದಾರರು ಶಿಕ್ಷಣ ಕ್ಷೇತ್ರದಲ್ಲಿನ ಪ್ರಸ್ತುತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಿದ್ದು, ಇದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.  

ಉದ್ಘಾಟನಾ ದಿನದಂದು ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದು, ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ  ವಿದ್ಯಾರ್ಥಿಗಳು ರಾತ್ರಿ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. 

 ಸಮ್ಮೇಳನದಲ್ಲಿ ಎರಡು ವಿಶೇಷ ಉಪನ್ಯಾಸಗಳು ಇರಲಿದ್ದು, ಶನಿವಾರ ‘ಪ್ರಸಕ್ತ ಭಾರತ’  ಕುರಿತು ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನಿಲ್ ಅಂಬೇಕರ್ ಮತ್ತು ನಿಕಟ ಪೂರ್ವ ಎಬಿವಿಪಿ ರಾಷ್ಟ್ರೀಯ ಸಹ-ಸಂಘಟನಾ ಕಾರ್ಯದರ್ಶಿ ಕೆ.ಎನ್. ರಘುನಂದನ್ ಅವರು ಭಾನುವಾರ ‘ನಮ್ಮ ಕೆಲಸದ ಸಂಸ್ಕೃತಿ-ಅದರ ಸ್ವರೂಪ ಮತ್ತು ಪ್ರಸ್ತುತತೆ’ ಕುರಿತು ಉಪನ್ಯಾಸ ನೀಡಲಿದ್ದಾರೆ.  

ಶನಿವಾರ ರಥ ಬೀದಿಯಲ್ಲಿ ನಡೆಯುವ ಶೋಭಾ ಯಾತ್ರೆ ನಂತರ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಾಯಕ್ ಮತ್ತು ಶೆಟ್ಟಿ ಹೇಳಿದ್ದಾರೆ.