ನವದೆಹಲಿ 08: ಮುಖ್ಯಮಂತ್ರಿ ಅತಿಶಿ ನಿವಾಸದಲ್ಲಿ ಚಿನ್ನದ ಕಮೋಡ್, ಈಜುಕೊಳಗಳು ಸೇರಿದಂತೆ ಐಶಾರಾಮಿ ಸೌಲಭ್ಯಗಳಿವೆ ಎಂದು ಬಿಜೆಪಿ ಆರೋಪ ಮಾಡಿತ್ತು. ಈ ಆರೋಪ ತಳ್ಳಿಹಾಕಿದ್ದ ಎಎಪಿ, ಹಾಗಿದ್ದರೆ ಪ್ರಧಾನಿ ನಿವಾಸದಲ್ಲಿ ಏನೆಲ್ಲ ಸೌಲಭ್ಯವಿದೆ ಎಂದು ಜನರಿಗೆ ತೋರಿಸುವಂತೆ ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಿತು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೆಹಲಿ ನಿವಾಸದೆದುರು ಪ್ರತಿಭಟನೆ ನಡೆಸಿದ ಎಎಪಿ ಮುಖಂಡರಾದ ಸೌರಭ್ ಭಾರದ್ವಾಜ್, ಸಂಜಯ್ ಸಿಂಗ್ ಮತ್ತು ಇತರ ನಾಯಕರು, ಬಳಿಕ ಪ್ರಧಾನಿ ನಿವಾಸಕ್ಕೆ ಪ್ರವೇಶಿಸಲು ಮುಂದಾಗಿದ್ದಾರೆ. ಈ ಸಂದರ್ಭ ಭದ್ರತಾ ಸಿಬ್ಬಂದಿ ಅವರಿಗೆ ತಡೆಯೊಡ್ಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ಸಿಂಗ್, ಬಿಜೆಪಿಗರು ಸಿಎಂ ನಿವಾಸದ ಸೌಲಭ್ಯಗಳ ಬಗ್ಗೆ ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ. ಚಿನ್ನದ ಕಮೋಡ್, ಈಜುಕೊಳ, ಮಿನಿ ಬಾರ್ ಎಲ್ಲಿದೆ ಎಂದು ತೋರಿಸಲಿ. ಹಾಗೆಯೇ ಪ್ರಧಾನಿ ನಿವಾಸದ ದರ್ಶನವನ್ನು ಜನರಿಗೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ. ಪ್ರಧಾನಿ ನಿವಾಸದಲ್ಲಿ ಸೌಲಭ್ಯಗಳ ಕುರಿತ ಪರಿಶೀಲನೆಗೆ ಬಂದಿದ್ದ ಎಎಪಿ ನಿಯೋಗಕ್ಕೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಈಗ ಹಿಂದಿರುಗುತ್ತಿದ್ದೇವೆ ಎಂದಿದ್ದಾರೆ.
ಪ್ರಧಾನಿ ನಿವಾಸದಲ್ಲಿಯೂ ಶೋಧ ನಡೆಸಬೇಕು. ರೂ.33 ಕೋಟಿ ವೆಚ್ಚದಲ್ಲಿ ಸಿಎಂ ನಿವಾಸ ನಿರ್ಮಾಣವಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ರೂ. 2700 ಕೋಟಿ ವೆಚ್ಚದಲ್ಲಿ ಪ್ರಧಾನಿ ಮನೆ ಕಟ್ಟಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಎರಡೂ ನಿವಾಸಗಳನ್ನು ನೋಡಬೇಕು ಎಂದಿದ್ದಾರೆ. ಪ್ರತಿ ದಿನ ಹೊಸ ಹೊಸ ಫೋಟೊ, ವಿಡಿಯೊಗಳನ್ನು ಕಳುಹಿಸುತ್ತಿದ್ದ ಬಿಜೆಪಿಯವರು, ಇಂದು ನಾವು ಮಾಧ್ಯಮ ಪ್ರತಿನಿಧಿಗಳ ಜೊತೆ ಪ್ರಧಾನಿ ನಿವಾಸ ನೋಡಲು ಬಂದರೆ ನಾಪತ್ತೆಯಾಗಿದ್ದಾರೆ ಎಂದು ಕುಟುಕಿದರು.
ದೆಹಲಿ ಮುಖ್ಯಮಂತ್ರಿ ಮನೆಗೆ ನುಗ್ಗಲು ಯತ್ನಿಸಿದ್ದ ಬಿಜೆಪಿ ಮುಖಂಡರ ಪ್ರತಿಭಟನೆಗೆ ಪ್ರತಿಯಾಗಿ ಎಎಪಿ, ಪ್ರಧಾನಿ ನಿವಾಸವನ್ನೂ ಜನರಿಗೆ ತೋರಿಸಿ ಎಂದು ಈ ಪ್ರತಿಭಟನೆ ಹಮ್ಮಿಕೊಂಡಿತ್ತು.