ಮನುಷ್ಯತ್ವವಿಲ್ಲದಿರೆ ಮಂಗಳನಂಗಳದಲೂ ಮಣ್ಣು ಮುಕ್ಕುವೆವು
ಯಾವ ತೃಷೆಯೂ ತೀರಲಿಲ್ಲ ದಾಹ ದ್ವೇಷದಿಂದ ಬಂಧಿಯೊ
ಎಷ್ಟು ಎತ್ತರಕ್ಕೇರಿದರೇನು ನೆಲದ ನಂಟು ಅರಿಯದಿದ್ದೊಡೆ, ರಾಗ, ದ್ವೇಷಗಳ ಬಿಟ್ಟು ಮನುಷ್ಯತ್ವವನ್ನು ಅಪ್ಪೋಣ ಎನ್ನುವ ರಾಘವೇಂದ್ರ ಕುಪ್ಪೇಲೂರು ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯವರು. ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. ಕಥೆ, ಕವಿತೆ, ಕಾದಂಬರಿ, ಗಜಲ್ ಬರವಣಿಗೆಯಲ್ಲಿ ತೊಡಗಿರುವ ಇವರು ಸಂಕಲನಗಳ ಮುಖಪುಟ ಮಾಡುವುದರಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಇವರು ಮಾಡಿಕೊಟ್ಟ ಹೆಸರಾಂತ ಲೇಖಕರ ಪುಸ್ತಕಗಳ ಮುಖಪುಟಗಳು ಜನಮೆಚ್ಚುಗೆ ಗಳಿಸಿರುವುದನ್ನು ಗಮನಿಸಬಹುದು. ಫೋಟೋಗ್ರಫಿ ಕೂಡ ಇವರ ಪ್ರಮುಖ ಆಸಕ್ತಿಕರ ವಿಷಯಗಳಲ್ಲಿ ಒಂದು. ಖೋ ಖೋ ಹಾಗೂ ಅಟಾ-ಪಟ್ಯಾ ಕ್ರೀಡೆಯಲ್ಲಿ ನಾಲ್ಕು ಬಾರಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಒಂದು ಬಂಗಾರದ ಪದಕ ಹಾಗೂ ನಾಲ್ಕು ಕಂಚಿನ ಪದಕ ಪಡೆದುಕೊಂಡಿದ್ದಾರೆ. ‘ಪ್ಲಾಟ್ ಫಾರಂ ನಂ 3’ ಕಿರು ಕಾದಂಬರಿ, ‘ಹಿಂಗಂದ್ರ ಹ್ಯಾಂಗ’ ಕವನ ಸಂಕಲನ ಪ್ರಕಟಿಸಿದ್ದಾರೆ. ಹಾವೇರಿ ಜಿಲ್ಲಾ ಕ್ರೀಡಾ ಪ್ರಶಸ್ತಿ, ಕನ್ನಡ ಕೂಲಿ ರಾಮಜಾಧವ ಗ್ರಂಥ ಬಹುಮಾನ, ಡಾ. ಪ್ರಹ್ಲಾದ ಅಗಸನಕಟ್ಟೆ ಕಥಾ ಪ್ರಶಸ್ತಿ, ಟೋಟೋ ಪುರಸ್ಕಾರದ ಅಂತಿಮ ಶಾರ್ಟ್ ಲಿಸ್ಟ್‌ಗೆ ಇವರ ಕಥೆ ಆಯ್ಕೆ, ನಾಡೋಜ ಡಾ. ಚೆನ್ನವೀರ ಕಣವಿ ಕಾವ್ಯ ಪುರಸ್ಕಾರ ಸೇರಿದಂತೆ ಅನೇಕ ಸಮ್ಮಾನಗಳು ಇವರಿಗೆ ಲಭಿಸಿವೆ. ಉತ್ತಮವಾಗಿ ಗಜಲ್ ಬರೆಯುವ ಹಾಗೂ ಅದನ್ನು ಪ್ರಸ್ತುತ ಪಡಿಸುವಲ್ಲಿಯೂ ಸೃಜನಶೀಲತೆ ವ್ಯಕ್ತಪಡಿಸುವ ರಾಘವೇಂದ್ರ ಅವರ ಗಜಲ್‌ನ ಓದು, ಒಳನೋಟ ನಿಮ್ಮ ಸಮ್ಮುಖ.
ಗಜಲ್
ನನ್ನ ಮುಂಬರುವ ಸಾವಿಗೆ ನಾನಿದ್ದಾಗಲೇ ಮಾಡಿಬಿಡುವ ಎರಡೆ ನಿಮಿಷದ ಮೌನಾಚರಣೆ
ಕಟು ಮಾತುಗಳಿಗಿಂತ ಮೌನವೆ ಬಲು ಹಿತವೆನಿಸುವ ಎರಡೆ ನಿಮಿಷದ ಮೌನಾಚರಣೆ
ಕಲಿಸಬೇಕಿಲ್ಲ ಯಾರಿಗೂ ಗಾಂಭೀರ್ಯದ ನಟನೆ ಸಾವೆಂಬುದು ಕರುಣೆ ಬಿತ್ತುವ ಕೂರಿಗೆ
ಒಳಗಿನ ಹುನ್ನಾರಕ್ಕಿಂತ ಗಂಟು ಮೋರೆಯ ಮುನಿಸೆ ಲೇಸೇನಿಸುವ ಎರಡೆ ನಿಮಿಷದ ಮೌನಾಚರಣೆ
ಆಕಳಿಕೆ ಕೆಮ್ಮು ಸೀನುಗಳೆಲ್ಲ ಭಂಗ ತರಬಹುದು ನಿಮ್ಮ ಶೃದ್ಧೆಗೆ ಮುಖವಾಡ ಕಳಚುವಂತೆ
ಮೋಸದ ನಗುವಿಗಿಂತ ತಲೆ ತಗ್ಗಿಸಿದ ಮುಖವೆ ವಾಸಿಯೆನಿಸುವ ಎರಡೆ ನಿಮಿಷದ ಮೌನಾಚರಣೆ
ಮತ್ತೆ ಹುಟ್ಟಿ ಬಾ ಎಂಬ ಬ್ಯಾನರ್ ಬುಡದಲಿ ಅನೇಕ ಅಸ್ಮಿತೆಗಳ ಗೂಟ ಬಲು ಭದ್ರವಾದಂತಿವೆ
ಸಂಭ್ರಮಿಸುವ ಅತಿರೇಕಕ್ಕಿಂತ ನೂರು ಸಸಿ ನೆಟ್ಟು ನೀರುಣಿಸುವ ಎರಡೆ ನಿಮಿಷದ ಮೌನಾಚರಣೆ
ಆತ್ಮಕ್ಕೆ ಶಾಂತಿ ಎಂಬ ಮೊರೆಯ ತೂರುತ್ತಿರಲ್ಲ ನನ್ನ ಹಸಿದ ಕರುಳಿನ ಮೊರೆತಗಳ ಬಲ್ಲಿರೇನು
ಹುಸಿ ಕಂಬನಿಗಿಂತ ತಾತ್ಸಾರದ ಲೊಚಗುಟ್ಟುವಿಕೆ ಇಂಪೆನಿಸುವ ಎರಡೆ ನಿಮಿಷದ ಮೌನಾಚರಣೆ
ಕ್ಲಿಕ್-ಕಿಸಿದ ಸೆಲ್ಫಿಯನು ಫೇಸ್‌ಬುಕ್ಕಿನ ಗೋಡೆಗೆ ನೇತುಹಾಕಿ ಕರುಣೆ ಗಿಟ್ಟಿಸುತ್ತಾನೆ ನಿರೂಪಕ
ಜಾಲತಾಣ ಸಂತೆಯಲಿ ನನ್ನ ಹರಾಜಿಗಿಂತ ಖುದ್ದು ಅಣಕಿಸುವ ಎರಡೆ ನಿಮಿಷದ ಮೌನಾಚರಣೆ
ಕೊನೆಗೆ ಎಷ್ಟು ಸಲೀಸಾಗಿ ಮೌನಮುರಿದು ನಡೆದುಬಿಡುತ್ತೀರಲ್ಲ ಯಾರಿಗೂ ಸಂಬಂಧವಿಲ್ಲದಂತೆ
ಖಾಲಿ ಹರಟೆಗಿಂತ ಮೌನದ ಗೊಂದಲವೇಕೆ ಕಿವಿಗೊಡುವ ಎರಡೆ ನಿಮಿಷದ ಮೌನಾಚರಣೆ
- ರಾಘವೇಂದ್ರ ಕುಪ್ಪೇಲೂರ
ಸಾವು ಕಾಡಿದಷ್ಟು ಬೇರಾವ ಸಂಗತಿಯೂ ಬರಹಗಾರರನ್ನು ಕಾಡಿದ್ದಿಲ್ಲ. ಸಾವಿನ ನಂತರ ನಿರ್ಮಾಣವಾಗುವ ಸನ್ನಿವೇಶಗಳು ಕೂಡ ಮನುಷ್ಯನನ್ನು ವಿಹ್ವಲಗೊಳಿಸುತ್ತವೆ. ಬದುಕಿದ್ದಾಗ ಬಳಿಯೂ ಸುಳಿಯದ ಬಂಧುಗಳು, ಇದ್ದಾಗ ಕೊಂಚವೂ ಕಷ್ಟ ಕೇಳದ ಗೆಳೆಯರು ಉಸಿರು ನಿಂತ ಬಳಿಕ ತೋರುವ ಲಿಪ್ ಸಿಂಪಥಿ, ಮಾಡುವ ಗುಣಗಾನ ಎಲ್ಲವೂ ವ್ಯರ್ಥ ಎಂಬುದು ಎಲ್ಲರಿಗೂ ತಿಳಿಯದ ಸಂಗತಿಯೇನಲ್ಲ. ತತ್ವಪದಕಾರರು, ದಾರ್ಶನಿಕರು ಈ ಬದುಕು ಶಾಶ್ವತವಲ್ಲ, ನೀರ ಮೇಲಣ ಗುಳ್ಳೆ ಎಂದು ನಶ್ವರತೆಯ ಕುರಿತು ಅರಿವು ಮೂಡಿಸಿ, ಎಲ್ಲರಿಗೂ ಬೇಕಾಗಿ ಬದುಕುವುದೇ ಒಳ್ಳೆಯ ಬದುಕು ಎಂದಿದ್ದರೂ ಅಂತಹ ಬದುಕನ್ನು ತಮ್ಮದಾಗಿಸಿಕೊಳ್ಳುವವರು ತೀರಾ ಕಡಿಮೆ. ನಾನು ಇಲ್ಲದಾಗ ಲೋಕ ಏನೆಲ್ಲ ಮಾಡಬೇಕು ಎಂಬ ಮನವರಿಕೆಯನ್ನು ಕವಿ ಗಜಲ್ ಮೂಲಕ ಮಾಡಿಕೊಡುತ್ತಾನೆ. ಬಹುಶಃ ಮುಂಬರುವ ಸಾವನ್ನು ಸ್ವಾಗತಿಸಲು ಮಾಡಿಕೊಳ್ಳುವ ತಯಾರಿಯಂತೆಯೂ ಇದು ಭಾಸವಾಗುತ್ತದೆ.
ಇದ್ದಾಗ ಎದುರಿಗೆ ಹೇಳದ ನಾಲ್ಕು ಒಳ್ಳೆಯ ಮಾತುಗಳನ್ನು ಕಣ್ಣು ಮುಚ್ಚಿದಾಗ ಹೇಳಿದರೆ ಕೇಳಿಸಿಕೊಳ್ಳಬಲ್ಲುದೇ ಹೋದ ಜೀವ. ಹಾಗಾಗಿ ಮುಂದೆ ಬರುವ ಸಾವಿಗೆ ನೀವಾಡುವ ಕಟು ಮಾತುಗಳಿಗಿಂತ ಎರಡೇ ಎರಡು ನಿಮಿಷದ ಮೌನಾಚರಣೆ ಸಾಕು. ಸಾವೆಂಬುದು ಪ್ರತಿ ಎದೆಯೊಳಗೆ ಕರುಣೆ, ಅನುಕಂಪವನ್ನೇ ಬಿತ್ತುತ್ತದೆ. ಮೋಸದ ನಗುವಿಗಿಂತ ನಿಮ್ಮ ತಲೆ ತಗ್ಗಿಸಿದ ಮುಖ, ‘ಮತ್ತೆ ಹುಟ್ಟಿ ಬಾ’ ಎಂದು ಸುಮ್ಮನೆ ಕಾಟಾಚಾರಕ್ಕೆ ಫೋಟೋ ಲಗತ್ತಿಸಿ ನೀವು ಕೋರುವ ಶೃದ್ಧಾಂಜಲಿಗಿಂತ, ಸಾವಿಗೂ ಸಂಭ್ರಮಿಸಿ ವಿಕೃತತೆ ಮೆರೆವ ಅತಿರೇಕಕ್ಕಿಂತ, ಒಳಗೊಳಗೆ ಕತ್ತಿ ಮಸೆವ ಸಂಚಿಗಿಂತಲೂ, ಸಸಿ ನೆಟ್ಟು ನೀರುಣಿಸುವ, ಮುಖ ಗಂಟಿಕ್ಕಿಕೊಂಡು ನೀವು ಸಲ್ಲಿಸುವ ಎರಡು ನಿಮಿಷದ ಮೌನವೇ ವಾಸಿಯೆನಿಸುತ್ತದೆ. ನನ್ನ ಕರುಳಿನ ಹಸಿವಿನ ಮೊರೆತ ಎಂದೆಂದೂ ಆಲಿಸಲಿಲ್ಲ ನೀವು, ಈಗ ಹುಸಿ ಕಂಬನಿಗರೆದು ಲೊಚಗುಟ್ಟುತ್ತೀರಿ. ನೀವು ಫೇಸ್‌ಬುಕ್‌ನ ಗೋಡೆಯ ಮೇಲೆ ಹಾಕುವ ನನ್ನ ಭಾವಚಿತ್ರ ಜಾಲತಾಣ ಸಂತೆಯಲ್ಲಿ ನನ್ನ ಹರಾಜಿಗಿಟ್ಟಂತೆ ಅಣಕಿಸುತ್ತದೆ. ಇಷ್ಟೆಲ್ಲ ಮಾಡುವುದಕ್ಕಿಂತ ಮೌನವಾಗಿಯೇ ಸಲ್ಲಿಸುವ ಎರಡು ನಿಮಿಷದ ಮೌನಾಚರಣೆ ಸಾಕೆನಿಸುತ್ತದೆ.
ನನ್ನ ಮುಂಬರುವ ಸಾವು ಹೀಗಾದರೂ ಸಾರ್ಥಕತೆ ಪಡೆಯಲಿ ಎಂದು ಅಲವತ್ತುಕೊಳ್ಳುವ ಕವಿ ರಾಘವೇಂದ್ರ ಕುಪ್ಪೇಲೂರು ಅವರ ಗಜಲ್, ಕೃತಕತೆಯ ಸೋಗು ಹಾಕಿ ಮೆರೆವ ಮಂದಿಗೆ ಸಹಜತೆಯ ಅರಿವು ಮೂಡಿಸುತ್ತದೆ. ಕವಿಗೆ ನಮನಗಳು.
- * * * -