ವಕ್ಪ್ ಕಾಯ್ದೆಗೆ ಪಾರದರ್ಶಕ ತಿದ್ದುಪಡಿ ಭರವಸೆ

ವಿಜಯಪುರ 07: ‘ವಕ್ಪ್‌ ಹಠಾವೋ, ದೇಶ ಬಚಾವೊ’ ಘೋಷಣೆಯೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬಿಜೆಪಿ ಮುಖಂಡರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹೋರಾಂಗಣದಲ್ಲಿ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಗುರುವಾರ ಅಂತ್ಯಗೊಳಿಸಿದರು.

ವಕ್ಫ್‌ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಅಹವಾಲು ಆಲಿಸಿ, ಪ್ರತಿಭಟನಾಕಾರರ ಬೇಡಿಕೆಗಳನ್ನು ತಿದ್ದುಪಡಿ ಕಾಯ್ದೆಯಲ್ಲಿ ಸೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಕೈಬಿಟ್ಟರು.

‘ವಕ್ಪ್‌ ಕಾಯ್ದೆಗೆ ಕೇಂದ್ರ ಸರ್ಕಾರ ಪಾರದರ್ಶಕ ತಿದ್ದುಪಡಿ ತರಲಿದ್ದು, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಿದೆ. ಪ್ರಸ್ತುತ ಕಾಯ್ದೆಯಲ್ಲಿರುವ ತೊಡಕುಗಳನ್ನು ಸರಿಪಡಿಸಿ, ಭವಿಷ್ಯದಲ್ಲಿ ವಕ್ಪ್‌ನಿಂದ ರೈತರಿಗೆ, ಮಠ, ಮಂದಿರ, ಐತಿಹಾಸಿಕ ಸ್ಮಾರಕಗಳು ಸೇರಿದಂತೆ ಯಾರಿಗೂ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ತರಲು ಜೆಪಿಸಿ ಪೂರಕ ಸಲಹೆ ನೀಡಲಿದೆ’ ಎಂದು ಪಾಲ್‌ ಹೇಳಿದರು.

‘ರೈತರಿಗೆ ನೋಟಿಸ್‌ ನೀಡಿರುವ ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ವಕ್ಪ್‌ ಬೋರ್ಡ್‌ ಅಧಿಕಾರಿಗಳನ್ನು ಅಗತ್ಯವಿದ್ದರೇ ದೆಹಲಿಗೆ ಕರೆಯಿಸಿ, ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ತೊಂದರೆಗೆ ಒಳಗಾದ ರೈತರ ಹಾಗೂ ಅಹೋರಾತ್ರಿ ಧರಣಿ ಕುಳಿತವರ ನಿಯೋಗವನ್ನು ದೆಹಲಿಗೆ ಕರೆಯಿಸಿಕೊಂಡು ಮತ್ತೊಮ್ಮೆ ಅಹವಾಲು ಆಲಿಸಲಾಗುವುದು’ ಎಂದು ಪಾಲ್‌ ಭರವಸೆ ನೀಡಿದರು.

‘ಕರ್ನಾಟಕಕ್ಕೆ ನಾನು ಭೇಟಿ ನೀಡಿರುವುದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುವ ಬದಲಿಗೆ, ರೈತರಿಗೆ ನೋಟಿಸ್‌ ಏಕೆ ನೀಡಿದ್ದೀರಿ ಎಂಬುದಕ್ಕೆ ಮೊದಲು ಉತ್ತರ ನೀಡಿ’ ಎಂದು ಪಾಲ್ ಪ್ರಶ್ನಿಸಿದರು.

‘ನಾನು ಜೆಪಿಸಿ ಅಧ್ಯಕ್ಷನಿದ್ದೇನೆ. ವಕ್ಪ್‌ನಿಂದ ರೈತರಿಗೆ ಆಗಿರುವ ತೊಂದರೆ ಕೇಳಲು, ಅಹವಾಲು ಆಲಿಸಲು ಬಂದಿದ್ದೇನೆ ದೇಶದ ಯಾವುದೇ ರಾಜ್ಯಕ್ಕೆ ಬೇಕಾದರೂ ಭೇಟಿ ನೀಡಿ ಕಾಯ್ದೆಗೆ ಪೂರಕವಾದ ಅಭಿಪ್ರಾಯ ಸಂಗ್ರಹಿಸಬಹುದು, ತೊಂದರೆಗೆ ಒಳಗಾದವರ ಅಹವಾಲು ಆಲಿಸಬಹುದು. ಇದನ್ನು ಪ್ರಶ್ನಿಸುವ ಅಧಿಕಾರ ಕಾಂಗ್ರೆಸ್‌ಗೆ ಇಲ್ಲ’ ಎಂದು ತಿರುಗೇಟು ಹೇಳಿದರು.

ಜಂಟಿ ಸಂಸದೀಯ ಸಮಿತಿ ಸದಸ್ಯ ತೇಜಸ್ವಿ ಸೂರ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ,ಮಹೇಶ ಟೆಂಗಿನಕಾಯಿ, ಸಿದ್ದು ಸವದಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಅಣ್ಣಾ ಸಾಹೇಬ ಜೊಲ್ಲೆ, ಅಪ್ಪು ಪಟ್ಟಣ ಶೆಟ್ಟಿ, ರಮೇಶ ಭೂಸನೂರ, ಎಸ್‌.ಕೆ.ಬೆಳ್ಳುಬ್ಬಿ, ಆರ್‌.ಎಸ್‌.ಪಾಟೀಲ ಕೂಚಬಾಳ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೊಲ್ಹಾಪುರ ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ  ಇದ್ದರು.