ಯಶಸ್ವಿಯಾದ ಬಣ್ಣದ ಅಂಗಳದಲ್ಲಿ ಚಿಣ್ಣರ ತೇರು ಹಾಗೂ ಮಕ್ಕಳ ಸಂತೆ

ಯಶಸ್ವಿಯಾದ ಬಣ್ಣದ ಅಂಗಳದಲ್ಲಿ ಚಿಣ್ಣರ ತೇರು ಹಾಗೂ ಮಕ್ಕಳ ಸಂತೆ A successful children's float and children's festival in the colorful courtyard

ಲೋಕದರ್ಶನ ವರದಿ 

          ಧಾರವಾಡ 26 : ಹರ ಹರ ಮಹಾದೇವ.. ಎಳಿರೋ ಎಳಿರೋ.. ಎಂದು ತೇರನ್ನು ಎಳೆಯುತ್ತಿರುವುದು.. ಇನ್ನೊಂದೆಡೆ ಮಜ್ಜಿಗೆ, ಶೇಂಗಾ ಉಂಡೆಗಳು ಸೇರಿದಂತೆ ಆಹಾರದ ತಿಂಡಿ-ತಿನಿಸುಗಳನ್ನು ಮಾರುತ್ತಿರುವ ಮಕ್ಕಳ ದೃಶ್ಯಗಳು... ಹೌದು ಇಂದಿನ ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ಕೇವಲ ಮೊಬೈಲ್‌ಗಳಿಗೆ ಸೀಮಿತವಾಗಿ ಊರು, ಹಳ್ಳಿಗಳಲ್ಲಿ ನಡೆಯುವ ಜಾತ್ರೆಗಳಿಂದ ದೂರ ಉಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ರಂಗಾಯಣವು ಸೃಷ್ಠಿಸಿದ ‘ಚಿಣ್ಣರ ತೇರು ಹಾಗೂ ಮಕ್ಕಳ ಸಂತೆ’ ಬಲು ಜೋರಾಗಿಯೇ ನಡೆಯಿತು.  

ಇಂದು ರಂಗಾಯಣವು ‘ಅಭಿನಯ-ಅಭಿವ್ಯಕ್ತಿ” ಧ್ಯೇಯವಾಕ್ಯದಡಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಸಿದ್ಧಪಡಿಸಿದ್ದ “ರಂಗಾಯಣ ತೇರಿ”ಗೆ ಜನಪದ ಹಾಡುಗಾರರಾದ ಇಮಾಮಸಾಬ್ ವಲ್ಲೆಪ್ಪನವರ ಹಾಗೂ ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ಪೂಜೆಯನ್ನು ಸಲ್ಲಿಸಿ, ರಂಗಾಯಣದ ಕಲಾವಿದರು, ಸಿಬ್ಬಂದಿಗಳು ಹಾಗೂ ಮಕ್ಕಳು ತೇರನ್ನು ಎಳೆಯುವುದರ ಮೂಲಕ ಚಿಣ್ಣರ ಜಾತ್ರೆಗೆ ಚಾಲನೆಯನ್ನು ನೀಡಿದರು.  

ಮಕ್ಕಳಿಗೆ ಗ್ರಾಮೀಣ ಪ್ರದೇಶಗಳ ಸಂಪ್ರದಾಯ ಆಚರಣೆ ಹಾಗೂ ವ್ಯವಹಾರದ ಜ್ಞಾನವನ್ನು ನೀಡುವುದಕ್ಕಾಗಿ ರಂಗಾಯಣದ ಆವರಣದಲ್ಲಿ ಏರಿ​‍್ಡಸಲಾಗಿದ್ದ ‘ಚಿಣ್ಣರ ತೇರು ಹಾಗೂ ಮಕ್ಕಳ ಸಂತೆಗೆ ಜನಪದ ಹಾಡುಗಾರರಾದ ಇಮಾಮಸಾಬ್ ವಲ್ಲೆಪ್ಪನವರ ಅವರು ಚಾಲನೆ ನೀಡಿ, ಮಾತನಾಡಿ, ಹಳ್ಳಿ ಜನರು ಆಚರಿಸುವ ಸಂಪ್ರದಾಯಗಳ ಮಹತ್ವ ಹಾಗೂ ಸಂತೆಗಳಲ್ಲಿ ಹೇಗೆ ವ್ಯವಹಾರ ಮಾಡಬೇಕು ಎಂಬುದರ ಕುರಿತು ಮಕ್ಕಳಿಗಾಗಿ ರಂಗಾಯಣವು ಆಯೋಜಿಸಿರುವ ಈ ಶಿಬಿರದಲ್ಲಿ ತಿಳಿಸಿಕೊಟ್ಟಿರುವುದು ಸಂತಸದ ಸಂಗತಿಯಾಗಿದೆ. ಹೀಗೆ ರಂಗಾಯಣದ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.  

ಮಕ್ಕಳಿಗೆ ಹಳ್ಳಿಗಳಲ್ಲಿ ನಡೆಯುವಂತೆ “ರಂಗಾಯಣದ ತೇರ”ನ್ನು ಆವರಣದಲ್ಲಿ ಸಿದ್ಧಪಡಿಸಿ, ಡೊಳ್ಳುಗಳೊಂದಿಗೆ ಮಕ್ಕಳೇ ಚಿಣ್ಣರ ತೇರಿಗೆ ಜಯವಾಗಲಿ ಎಂದು ಘೋಷವಾಕ್ಯಗಳನ್ನು ಮಕ್ಕಳು ಖುಷಿಯಿಂದ ಕೂಗುತ್ತಾ, ಹಾಡುತ್ತಾ, ಕುಣಿಯುತ್ತ ತೇರನ್ನು ಎಳೆದುಕೊಂಡು ಹೋಗುವ ಮೂಲಕ ಚಿಣ್ಣರ ತೇರಿಗೆ ಮೆರುಗನ್ನು ನೀಡಿದರು. 

ಇಂದಿನ ಮಕ್ಕಳು ಹೊರಗಡೆಯ ಆಟಗಳನ್ನು ನಿಲ್ಲಿಸಿ, ಮನೆಯ ನಾಲ್ಕು ಗೋಡೆಗಳ ಮಧ್ಯೆ ಮೊಬೈಲ್‌ಗಳಲ್ಲಿಯ ಗೇಮ್‌ಗಳನ್ನು ಆಡುತ್ತಾ, ಬೇರೆಯವರೊಂದಿಗೆ ಬೆರೆಯದೇ, ಹೊರಗಿನ ಸುಂದರವಾದ ಪ್ರಪಂಚವನ್ನು ಮರೆತಿದ್ದಾರೆ. ಇಂತಹ ಮಕ್ಕಳಿಗೆ ಹಳ್ಳಿಯ ಸಂತೆಯನ್ನೆ ಇಂದು ರಂಗಾಯಣದ ಆವರಣದಲ್ಲಿ ಸೃಷ್ಠಿಸಿ, ಪ್ರಾಯೋಗಿಕವಾಗಿ ಮಕ್ಕಳಿಗೆ ಗ್ರಾಮೀಣ ಬದುಕು, ಖರೀದಿದಾರೊಂದಿಗೆ ಸಂಭಾಷಣೆ ಮಾಡುವ ಕೌಶಲ್ಯ ಹಾಗೂ ವ್ಯವಹಾರದ ಜ್ಞಾನವನ್ನು ನೀಡುವಲ್ಲಿ ಧಾರವಾಡ ರಂಗಾಯಣ ಯಶಸ್ವಿಯಾಯಿತು. 

ಶಿಬಿರದ ಮಕ್ಕಳು ಮನೆಯಲ್ಲಿ ತಯಾರಿಸಿದ ಶೇಂಗಾ ಚಿಕ್ಕೆ, ಉಂಡೆಗಳು, ಚುರುಮುರಿ, ಮಿರ್ಚಿ-ಗಿರಮಿಟ್, ಸಾವಯುವ ಕೃಷಿಯಿಂದ ತಯಾರಿಸಿದ ವಸ್ತುಗಳು, ಚಿತ್ರಕಲೆಯ ಚಿತ್ರಪಟಗಳು, ಗುಡಿ ಕೈಗಾರಿಕೆ ವಸ್ತುಗಳು, ಕರಕುಶಲ ವಸ್ತುಗಳು, ಪುಸ್ತಕಗಳು, ಪೆನ್ನು, ಸಿಹಿತಿನಿಸುಗಳು, ತರಕಾರಿ, ಕಡ್ಲೆಕಾಯಿ,  ಇತ್ಯಾದಿಗಳನ್ನು ಮಕ್ಕಳೆ ಮನೆಯಿಂದ ತಂದು ತಾವೇ ಮಾರಾಟ ಮಾಡಿದರು. ಹಾಗೂ ಇಂದಿನ ದಿನಕ್ಕೆ ತಕ್ಕಂತೆ ಫೋನ್ ಪೇ, ಗೂಗಲ್ ಪೇ ಸ್ಕ್ಯಾನರ್‌ಗಳನ್ನು ಬಳಸಿದ್ದು ವಿಶೇಷವಾಗಿತ್ತು. ಇದರಿಂದ ಮಕ್ಕಳು ವ್ಯಾಪಾರ ಮಾಡುವ ಕಲೆಯನ್ನು ಕಲಿತುಕೊಳ್ಳುವ ಮೂಲಕ ವ್ಯವಹಾರದ ಜ್ಞಾನವನ್ನು ಬೆಳಸಿಕೊಂಡರು. 

ಈ ಸಂದರ್ಭದಲ್ಲಿ ಶಿಬಿರದ ಸಂಚಾಲಕರಾದ ಅರುಣಕುಮಾರ ಮೇದಾರ, ತರಬೇತುದಾರರಾದ ರಾಜ್ ಕವಡೆನವರ, ಸಂಗೀತಗಾರರಾದ ಸುನಂದಾ ನಿಂಬನಗೌಡರ ಸೇರಿದಂತೆ ಇತರರು ಇದ್ದರು. ಅಲ್ಲದೇ ರಂಗಾಯಣದ ಕಲಾವಿದರು, ಮಕ್ಕಳು, ಪಾಲಕರು ರಂಗಾಯಣದ ಆವರಣದಲ್ಲಿ ರಂಗೋಲಿಗಳನ್ನು ಹಾಕಿ ಶೃಂಗರಿಸಿದರು. ರಂಗಾಯಣದ ರೆಪರ್ಟರಿ ಕಲಾವಿದರು ಸಂತೆಯಲ್ಲಿ ಕಳ್ಳತನ ಮಾಡುವುದು, ಪೊಲೀಸರು ಕಳ್ಳನ್ನು ಹಿಡಿಯುವುದು ಹಾಗೂ ರಂಗಾಯಣದ ಸಿಬ್ಬಂದಿ ಟ್ಯಾಕ್ಸ್‌ ಕೇಳುವ ದೃಶ್ಯಗಳು ನೈಜವೆಂಬಂತೆ ಮಕ್ಕಳಿಗೆ ನಿಜವಾದ ಸಂತೆಯ ವಾತಾವರಣವನ್ನು ಕಲ್ಪಿಸಿಕೊಡುವ ಮೂಲಕ ರಂಗಾಯಣದ ಮಕ್ಕಳ ಸಂತೆ ಹಾಗೂ ಜಾತ್ರೆಯು ಮನರಂಜನೆಯೊಂದಿಗೆ ಯಶಸ್ವಿಯಾಯಿತು.