ಬೆಂಗಳೂರು, ಅ 19: ಕಾಲೇಜಿನ ವೇದಿಕೆಯ ಮೇಲೆ ರ್ಯಾಂಪ್ ವಾಕ್ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಗರದ ಪೀಣ್ಯ ಏಮ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದಿದ್ದು, ಶನಿವಾರ ವರದಿಯಾಗಿದೆ. 21 ವರ್ಷದ ಶಾಲಿನಿ ಮೃತ ದುರ್ದೈವಿ. ಶಾಲಿನಿ ಏಮ್ಸ್ ಕಾಲೇಜ್ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿನಲ್ಲಿ ನಡೆಯಬೇಕಿದ್ದ ಫ್ರೆಶರ್ಸ್ ಡೇಗಾಗಿ ರ್ಯಾಂಪ್ ವಾಕ್ ಅಭ್ಯಾಸ ಮಾಡುತ್ತಿದ್ದ ವೇಳೆ ಶುಕ್ರವಾರ ಸಂಜೆ ವೇದಿಕೆಯ ಮೇಲೆ ಕುಸಿದುಬಿದ್ದಿದ್ದಾಳೆ. ತಕ್ಷಣವೇ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತ್ತಾದ್ದರೂ, ತಪಾಸಣೆ ನಡೆಸಿದ ವೈದ್ಯರು ಶಾಲಿನಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲಿನಿ ಮೃತದೇಹವನ್ನು ಮರಣೋತ್ತರ ಪರಿಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ ರವಾಸಲಾಗಿದೆ.