ಮೂಢನಂಬಿಕೆ ಹೋಗಲಾಡಿಸಲು ಆಧ್ಯಾತ್ಮಿಕ ಪ್ರವಚನ
ಯಮಕನಮರಡಿ 14: ಸ್ಥಳಿಯ ಭೀಮ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಜನರಲ್ಲಿ ಭಯ ಮೂಡಿಸಲಾಗಿದೆ. ಆದಕಾರಣ ಭೀಮನಗರದ ಯುವಕ ಮಿತ್ರರು ಹಿರಿಯರು ಸೇರಿಕೊಂಡು ಮುಗ್ಧ ಜನರಲ್ಲಿ ಮನೆ ಮಾಡಿರುವ ಮೂಢನಂಬಿಕೆಯನ್ನು ಹೋಗಲಾಡಿಸಲು ಐದು ದಿನಗಳ ಕಾಲ ಬಸವ ಜ್ಯೋತಿ ಬೆಳಗಿಸುವುದರ ಜೊತೆಗೆ ಸ್ಥಳೀಯ ಸುಕ್ಷೇತ್ರ ಹುಣಸಿಕೊಳ್ಳಮಠದ ಸಿದ್ದಬಸವ ದೇವರು ಶೂನ್ಯ ಸಂಪಾದನಾ ಪೀಠದ ಉತ್ತರಾಧಿಕಾರಿಗಳ ಮಾರ್ಗದರ್ಶನದಲ್ಲಿ ಐದು ದಿನಗಳ ಕಾಲ ಆಧ್ಯಾತ್ಮಿಕ ಪ್ರವಚನ ಹಾಗೂ ಹನ್ನೆರಡನೆ ಶತಮಾನದಲ್ಲಿ ಆಗಿಹೋದ ಶರಣರ ಕುರಿತು ಪ್ರವಚನವನ್ನು ಆಯೋಜಿಸಲಾಗಿದೆ.
ಹನ್ನೆರಡನೆ ಶತಮಾನದಲ್ಲಿ ಒಂದು ಲಕ್ಷ ತೊಂಭತ್ತಾರು ಶರಣರಲ್ಲಿ ಒಬ್ಬರಾದ ಐದಕ್ಕಿ ಮಾರಯ್ಯಾ ದಂಪತಿಗಳು ತಮ್ಮ ಪ್ರತಿನಿತ್ಯದ ಕಾಯಕದೊಂದಿಗೆ ಆರಿಸಿ ತಂದ ಅಕ್ಕಿಯಿಂದ ಶರಣರಿಗೆ ದಾಸೋಹ ಮಾಡುತ್ತ ಬಂದಿರುವ ದಂಪತಿಗಳು ದಲಿತ ಸಮುದಾಯದವರಿಗೆ ಸೇರಿದವರಾಗಿದ್ದರು ಸಹಿತ ಅಪ್ಪಟ ಶಿವಭಕ್ತರಾಗಿದ್ದರು. ಇವರ ಕುರಿತಾಗಿ ತಮ್ಮ ಪ್ರವಚನದಲ್ಲಿ ವಿಸ್ತಾರವಾಗಿ ವಿವರಿಸಿದರು.
ಬುದ್ಧ ಬಸವ ಅಂಬೇಡ್ಕರ ರವರ ಕುರಿತು ಜನರಲ್ಲಿ ಭಾವೈಕತೆ ಧರ್ಮ ಮೂಢನಂಬಿಕೆ ಇತ್ಯಾದಿಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾಮದ ಯುವಧುರಿಣ ಕಿರಣಸಿಂಗ ರಜಪೂತ ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಜನರು ಮೂಢನಂಬಿಕೆಯಿಂದ ಮುಕ್ತರಾಗಬೇಕೆಂದು ಹೇಳಿದರು. ಆಯೋಜಕರಾದ ಯಮನಪ್ಪ ಗೀರೆನ್ನವರ, ಸೋಮೇಶ ಜೀವನ್ನವರ, ಕಲ್ಲಪ್ಪ ಪೂಜೇರಿ, ಸಾಗರ ತೇಳಗೇರಿ, ಪರಶುರಾಮ ಕಾಂಬಳೆ, ರಮೇಶ ಜೀವನ್ನವರ, ನಾನಪ್ಪಾ ಬೇವಿನಕಟ್ಟಿ, ವಿಶ್ವನಾಥ ಗೀರೆನ್ನವರ, ಸುರೇಶ ಗುಡಿಕಡೆ, ದೇವಪ್ಪಾ ಹೂನ್ನೂರಿ, ನಿಂಗಪ್ಪಾ ಕೋಚರಗಿ ಮುಂತಾದವರು ಉಪಸ್ಥಿತರಿದ್ದರು.