ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು

ವಾಷಿಂಗ್ಟನ್, ನ.15 :     ದಕ್ಷಿಣ ಕ್ಯಾಲಿಫೋರ್ನಿಯಾದ ಸೌಗಸ್ ಪ್ರೌಢ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಗುಂಡು ಹಾರಿಸಿದ ನಂತರ ಸ್ವಯಂ ಗುಂಡು ಹಾರಿಸಿದ್ದರಿಂದ ಕನಿಷ್ಠ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಗುರುವಾರ ಜನ್ಮದಿನ ಆಚರಿಸಿಕೊಂಡ ಶಂಕಿತ ಆರೋಪಿ, ಶಾಲೆಗೆ ತೆರಳಿ ತನ್ನ ಬೆನ್ನ ಹಿಂದೆ ಇದ್ದ ಚೀಲದಿಂದ ಪಿಸ್ತೂಲ್ ತೆಗೆದು ಐವರು ಸಹಪಾಠಿಗಳ ಮೇಲೆ ಏಕಾಏಕಿ  ಗುಂಡು ಹಾರಿಸಿದ್ದಾನೆ. ಬಳಿಕ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಇವೆಲ್ಲವೂ ಕೇವಲ 16 ಸೆಕೆಂಡುಗಳಲ್ಲಿ ನಡೆದಿವೆ ಎಂದು ಬಿಬಿಸಿ ವರದಿ ಮಾಡಿದೆ. ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಅಲೆಕ್ಸ್ ವಿಲ್ಲಾನುಯೆವಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಂಭೀರ ಗಾಯಗೊಂಡಿರುವ ಶಂಕಿತನು ಈ ಕೃತ್ಯಕ್ಕೆ ಪಾಯಿಂಟ್ 45 ಕ್ಯಾಲಿಬರ್ ಅರೆ-ಸ್ವಯಂಚಾಲಿತ ಪಿಸ್ತೂಲ್ ಅನ್ನು ಬಳಸಿದ್ದಾನೆ ಎಂದು ಹೇಳಿದರು. ಹದಿನಾರು ವರ್ಷದ ಹುಡುಗಿ ಹಾಗೂ 14 ವರ್ಷದ ಬಾಲಕ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ವಿಭಾಗದ ಕ್ಯಾಪ್ಟನ್ ಕೆಂಟ್ ವೆಜೆನರ್ ಸುದ್ದಿಗಾರರೊಂದಿಗೆ ಮಾತನಾಡಿ, ಶಂಕಿತನದ್ದೆಂದು ಹೇಳಲಾಗಿರುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ' ನಾಳೆ  ಸೌಗಸ್ ಶಾಲೆಯಲ್ಲಿ ಮೋಜು ಮಾಡಿ' ಎಂದು ಬರೆದಿದ್ದಾನೆ. ಈ ಘಟನೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳಿಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು "ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮತ್ತೊಂದು ಹೃದಯ ವಿದ್ರಾವಕ ದಿನ" ಎಂದು ಕರೆದಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ ನಾಸಾದಲ್ಲಿ ಮಾತನಾಡಿದ ಅವರು,  ಸಾಮೂಹಿಕ ಗುಂಡಿನ ದಾಳಿಯನ್ನು ಕೊನೆಗೊಳಿಸಲು ಈ ಆಡಳಿತವು ಕೈಗೊಂಡ ಸಂಕಲ್ಪ ಇನ್ನೂ ಹಾಗೇ ಉಳಿದಿದೆ. ನಮ್ಮ ಕಾಲದಲ್ಲಿ ಈ ದುಷ್ಟತನವನ್ನು ಕೊನೆಗೊಳಿಸುವವರೆಗೆ ಮತ್ತು ನಮ್ಮ ಶಾಲೆಗಳನ್ನು ಮತ್ತು ನಮ್ಮವರನ್ನು ಸುರಕ್ಷಿತವಾಗಿಸುವವರಿಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಸ್ಥಳೀಯ ತನಿಖಾಧಿಕಾರಿಗಳಿಗೆ ಸಹಕಾರ ನೀಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡರಲ್ ಕಾನೂನು ಜಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪೆನ್ಸ್ ಹೇಳಿದ್ದಾರೆ. ಸಾಂತಾ ಕ್ಲಾರಿಟಾದ ವಿಲಿಯಂ ಎಸ್. ಹಾರ್ಟ್ ಸ್ಕೂಲ್ ಡಿಸ್ಟ್ರಿಕ್ ನ ಎಲ್ಲಾ ಶಾಲೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.  ಆದರೆ ನಂತರ ನಿರ್ಬಂಧಗಳನ್ನು ತೆಗೆದುಹಾಕಲಾಯಿತು ಎಂದು ತಿಳಿದುಬಂದಿದೆ.