ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಅಗತ್ಯ: ರಾಜಯೋಗಿನಿ ಬಿಕೆ ಸರೋಜಾ

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಅಗತ್ಯ: ರಾಜಯೋಗಿನಿ ಬಿಕೆ ಸರೋಜಾ A resolve is essential to build an addiction-free society: Rajayogini BK Saroja

ಲೋಹಗಾಂವ 31 :  ತಿಕೋಟಾ ತಾಲೂಕಿನ ಲೋಹಗಾಂವ ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಆಶ್ರಮದಲ್ಲಿ ಗುರುಪೂರ್ಣಿಮೆ ಹಾಗೂ ವ್ಯಸನಮುಕ್ತ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ಆಚರಿಸಲಾಯಿತು.ಲೋಹಗಾಂವ ಹಿರೇಮಠದ ಅಲ್ಲಮ ಪ್ರಭು ಮಹಾರಾಜರು ದಿವ್ಯ ಸಾನಿಧ್ಯ ವಹಿಸಿ, ವ್ಯಸನಮುಕ್ತ ಜೀವನದ ಮಹತ್ವದ ಕುರಿತು ಮಾತನಾಡಿದ ಗಣ್ಯರು, ಮಾದಕ ವಸ್ತುಗಳ ವ್ಯಸನವು ಸಮಾಜದ ಭವಿಷ್ಯವನ್ನು ಹಾಳುಮಾಡುವ ಗಂಭೀರ ಸಮಸ್ಯೆಯಾಗಿದೆ. ಯುವಜನತೆ ವ್ಯಸನದ ದಾಸ್ಯಕ್ಕೆ ಒಳಗಾಗದೆ, ಆತ್ಮಜ್ಞಾನ, ರಾಜಯೋಗ ಧ್ಯಾನ, ಉತ್ತಮ ಚಿಂತನೆ ಹಾಗೂ ಸತ್ಸಂಗದ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಕರೆ ನೀಡಿದರು.  

ವಿಜಯಪುರ ಬ್ರಹ್ಮಕುಮಾರಿ ಸೇವಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿಕೆ ಸರೋಜಾ ಅಕ್ಕನವರು ಮಾತನಾಡುತ್ತ ವ್ಯಸನವನ್ನು ಬಿಡುವುದು ಕೇವಲ ಒಂದು ಕೆಟ್ಟ ಅಭ್ಯಾಸವನ್ನು ತ್ಯಜಿಸುವುದಲ್ಲ; ಅದು ನಮ್ಮ ಆರೋಗ್ಯ, ಕುಟುಂಬ, ಗೌರವ ಮತ್ತು ಭವಿಷ್ಯವನ್ನು ಮರಳಿ ಪಡೆಯುವ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು 10 ಕೋಟಿ ಜನರಿಂದ ಆಗಸ್ಟ್‌ 5ರಿಂದ 20ರವರೆಗೆ ವ್ಯಸನ ಮುಕ್ತ ಪ್ರತಿಜ್ಞಾವಿಧಿ ಅಭಿಯಾನವನ್ನ ಕೈಗೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ವ್ಯಸನಮುಕ್ತ ಜೀವನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಯಾವುದೇ ರೀತಿಯ ಮಾದಕ ವಸ್ತುಗಳ ಸೇವನೆಗೆ ಒಳಗಾಗದೆ,

ತಮ್ಮ ಕುಟುಂಬ ಹಾಗೂ ಸಮಾಜದಲ್ಲಿ ವ್ಯಸನಮುಕ್ತ ವಾತಾವರಣ ನಿರ್ಮಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಸಂಕಲ್ಪ ಮಾಡಿದರು.ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಂ.ಡಿ. ಪಡಂದರ, ಗ್ರಾಮೀಣ ವಿದ್ಯಾವರ್ಧಕ ಸಂಘದ ನಿರ್ದೇಶಕ ವೇಮನ, ದೀಪಿಕಾ ಎನ್‌. ಬಿದರಿ, ಸಮಾಜ ಸೇವಕ ಬಿ.ಎಸ್‌. ಗಸ್ತಿ, ಜ್ಞಾನಭಾರತಿ ಶಾಲೆಯ ಶಿಕ್ಷಕ ರಾಠೋಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಗುರುಪೂರ್ಣಿಮೆಯ ಸಂದರ್ಭದಲ್ಲಿ ಗುರುವಿನ ಮಹತ್ವ, ಆತ್ಮಜ್ಞಾನ, ಸತ್ಚಿಂತನೆ ಹಾಗೂ ಸನ್ಮಾರ್ಗದ ಕುರಿತು ಚರ್ಚೆ ನಡೆಯಿತು. ಲೋಹಗಾಂವ ಗ್ರಾಮದ ಬ್ರಹ್ಮಕುಮಾರಿ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದರು. ಕಾರ್ಯಕ್ರಮದ ಕೊನೆಯಲ್ಲಿ ಬಿಕೆ.ಕವಿತಾ ಅಕ್ಕ ವಂದಿಸಿದರು. ಬಿಕೆ ಸಂಗೀತಕ್ಕ ನಿರೂಪಣೆ ಮಾಡಿದರು.