ಮಂಡ್ಯ, ನ 11 : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರದಲ್ಲಿ 34 ವರ್ಷಗಳ ನಂತರ ದಾಖಲೆಯ ಮಳೆಯಾಗಿದೆ.
ನವೆಂಬರ್ 8 ರ ರಾತ್ರಿ 7 ಗಂಟೆಯಿಂದ ಮರುದಿನ ನವೆಂಬರ್ 9 ರ ಬೆಳಗ್ಗೆ 7 ಗಂಟೆಯವರೆಗೆ 12 ಗಂಟೆಗಳ ಅವಧಿಯಲ್ಲಿ 166.8 ಮಿಲಿಮೀಟರ್ ಮಳೆ ಬಿದ್ದಿದೆ.
ಕಾವೇರಿ ನೀರಾವರಿ ನಿಗಮ ನಿಯಮಿತದ ಕಚೇರಿಯಲ್ಲಿ ಅಳವಡಿಸಲಾಗಿರುವ ಮಳೆ ನೀರು ಮಾಪಕದಲ್ಲಿ ಕೆ ಆರ್ ಎಸ್ ನಲ್ಲಿ 1985 ರಿಂದೀಚೆಗೆ 166.8 ಮಿಲಿಮೀಟರ್ ಮಳೆಯಾಗಿದೆ. ಇದಕ್ಕೂ ಮುನ್ನ 2012 ರಲ್ಲಿ 144 ಮಿಲಿಮೀಟರ್ ಮಳೆ ಬಿದ್ದಿತ್ತು ಮತ್ತು 2000 ನೇ ಇಸವಿಯಲ್ಲಿ 140 ಮಿಲಿಮೀಟರ್ ಮಳೆಯಾಗಿತ್ತು.
ಈ ಮಧ್ಯೆ ಕೆ ಆರ್ ಎಸ್ ಜಲಾಶಯದಲ್ಲಿ ಗರಿಷ್ಠ ಮಟ್ಟ ಸತತ 84 ನೇ ದಿನವಾದ ನವೆಂಬರ್ 10 ರಂದು ಕೂಡ 124.80 ಅಡಿ ಗರಿಷ್ಠ ಮಟ್ಟ ನೀರು ತುಂಬಿತ್ತು.
ಭಾರಿ ಮಳೆಯ ಕಾರಣ ಜಲಾಶಯದ ಒಳಹರಿವು ಹೆಚ್ಚಾಗಿದ್ದು 10,558 ಕ್ಯುಸೆಕ್ ನೀರು ಹರಿಬಿಡಲಾಗಿದೆ.
ಚಾಮರಾಜನಗರದಲ್ಲಿ ಭಾರಿ ಮಳೆಯ ಕಾರಣ ಗೋಪಿನಾಥಂ ಅಣೆಕಟ್ಟು ತುಂಬಿದ್ದು ಪ್ರವಾಸಿ ತಾಣ ಹೊಗೇನಕಲ್ ನಲ್ಲಿ ರಸ್ತೆಗಳಲ್ಲಿ ನೀರು ಹರಿದು ಪ್ರವಾಸಿಗರಿಗೆ ತೊಂದರೆಯುಂಟಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಬಳಿ ಇರುವ ಗೋಪಿನಾಥಂ ಅಣೆಕಟ್ಟು ಎರಡು ವರ್ಷಗಳ ನಂತರ ಭರ್ತಿಯಾಗಿದ್ದು ಕಳೆದೆರೆಡು ದಿನಗಳಿಂದ ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಚಿಕ್ಕ ಪುಟ್ಟ ಕೆರೆ ಹೊಂಡಗಳೂ ತುಂಬಿ ಹರಿಯುತ್ತಿವೆ.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕೆ ತಾತ್ಕಾಲಿಕವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರುಬ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.