ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ಬಹು ನೀರೀಕ್ಷಿತ ‘ಯುಐ' ಚಿತ್ರ ಇದೇ ಡಿಸೆಂಬರ್ 20ರಂದು ವಿಶ್ವಾದ್ಯಂತ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.
ಈಗಾಗಲೇ ಟ್ರೆಂಡ್ ಕ್ರಿಯೇಟ್ ಮಾಡಿರುವ ‘ಯುಐ’ ಸಿನಿಮಾದಿಂದ ಮೊನ್ನೆಯಷ್ಟೇ ವಾರ್ನರ್ ರೀಲೀಸ್ ಆಗಿದ್ದು ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಹೌದು ರೀಲೀಸ್ ಆದ ಒಂದೇ ದಿನದಲ್ಲಿ ಕನ್ನಡ ವಾರ್ನರ್‌ನ್ನು 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳ ಪ್ರಮೋಷನ್‌ಗಾಗಿ ಟೀಸರ್, ಟ್ರೇಲರ್, ಹಾಡುಗಳು ರೀಲೀಸ್ ಮಾಡುತ್ತಾರೆ. ಆದರೆ, ಉಪೇಂದ್ರ ವಾರ್ನರ್ ಮೂಲಕ ವಾರ್ ಶುರು ಮಾಡಿದ್ದಾರೆ. 2040ರಲ್ಲಿ ಪ್ರಾರಂಭವಾಗುವ ವಾರ್ನರ್‌ನಲ್ಲಿ ಸ್ಮಶಾನದಂತಿರುವ ನಗರದಲ್ಲಿ ಬಟ್ಟೆ, ಆಹಾರಕ್ಕಾಗಿ ಪರಿದಾಡುವ ಸ್ಥಿತಿ ಇದೆ. ಪ್ರಜೆಗಳಿಗೆ ಮೂಲಭೂತ ಅವಶ್ಯಕತೆ ಎಂದು ಸರ್ಕಾರ ಐ ಪೋನ್‌ಗಳನ್ನು ಉಚಿತವಾಗಿ ಹಂಚುತ್ತದೆ. ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇದ್ದರೂ ಜನ ಜಾತಿಯ ಹೆಸರೆಳಿಕೊಂಡು ಹೊಡೆದಾಡುವರು. ಜನ ದಿಕ್ಕಾರ ಕೂಗಿದಾಗ ಚಿತ್ರದ ನಾಯಕ ಉಪೇಂದ್ರ ದಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಪ್ರಜೆಗಳ ಮೇಲೆ ಗುಂಡಿನ ದಾಳಿ ನಡೆಸುತ್ತಾನೆ. ಇವೆಲ್ಲವೂ ‘ಯುಐ’ನ ವಾರ್ನರ್ ಹೈಲೈಟ್. ಒಂದೇ ದಿನ 5 ಭಾಷೆಯಲ್ಲಿ ವಾರ್ನರ್ ರೀಲೀಸ್ ಆಗಿದ್ದು, ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ.
ವಾರ್ನರ್ ಪತ್ರಿಕಾಗೋಷ್ಠಿಯಲ್ಲಿ ಮಾದ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವ ಉಪೇಂದ್ರ, ‘ಟ್ರೇಲರ್, ಟೀಸರ್ ಬೇಡ ಅಂತ ವಾರ್ನರ್ ಬಿಟ್ಟಿದ್ದೇವೆ. ನನಗೆ ಅನಿಸಿದ್ದು ಈ ವಾರ್ನರ್‌ನಲ್ಲಿ ಹೇಳಿದ್ದೇನೆ. ಸಿನಿಮಾದ ಸ್ವಲ್ಪ ಭಾಗ ಮಾತ್ರ ಬಿಟ್ಟಿದ್ದು ಚಿತ್ರದಲ್ಲಿ ಇನ್ನು ಟ್ವಿಸ್ಟ್‌ಗಳು ಇವೆ. ಚಿತ್ರದಲ್ಲಿ ಒಂದು ಮೆಸೇಜ್ ಇದ್ದು, ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಆಗಬಹುದು. ಸಿಂಬಾಲಿಸಂ ಜಾಸ್ತಿ ಇರುತ್ತದೆ. ಜೊತೆಗೆ ತುಂಬಾ ಲೆಯರ್ಸ್‌ಗಳು ಇದೆ. ಚಿತ್ರ ಅರ್ಥ ಆಗೋದು ಕಷ್ಟ. ಅದನ್ನು ತಿಳಿದರೆ ಅದ್ಬುತ. ಇದು ಹೀರೋ ಕತೆ ಸಿನಿಮಾ ಅಲ್ಲ. ಮುಂದಿನ ದಿನಗಳಲ್ಲಿ ಚಿತ್ರದ ಒಂದೆ ಒಂದು ತುಣುಕು ತೋರಿಸದೆ ರೀಲೀಸ್ ಮಾಡಿ ಸಿನಿಮಾ ಗೆಲ್ಲಿಸುವ ಆಸೆ ನನಗಿದೆ. ‘ಯುಐ’ ಬಗ್ಗೆ ತುಂಬಾ ವಿಷಯ ಬಿಟ್ಟುಕೊಟ್ಟಿಲ್ಲ. ಇದರಲ್ಲಿ ನಿಮ್ಮ ಕಥೆಯನ್ನು ಹೇಳಲು ಪ್ರಯತ್ನ ಪಟ್ಟಿದ್ದೇನೆ. ಚಿತ್ರಕ್ಕೆ ತುಂಬಾ ಜನರ ಶ್ರಮವಿದೆ. ‘ಎ’ ಸಿನಿಮಾ ರೀಲೀಸ್ ಆದಾಗ ಯಾರು ಇಷ್ಟ ಪಟ್ಟಿರಲಿಲ್ಲ ನಂತರ ಹಿಟ್ ಆಯ್ತು. ನಾನು ಏನೋ ಅಂದುಕೊಂಡು ಸಿನಿಮಾ ಮಾಡುತ್ತೇನೆ ಅದನ್ನು ಜನ ಇಷ್ಟ ಪಡುತ್ತಿದ್ದಾರೆ’ ಎಂದು ಹೇಳಿದರು.
ನಂತರ ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮಾತನಾಡಿ, ‘ಇಲ್ಲಿಂದ ನಮ್ಮ ಚಿತ್ರದ ಪ್ರಮೋಷನ್ ಶುರುವಾಗಿದ್ದು, ಹೋರ ರಾಜ್ಯಗಳಿಗೆ ಹೋಗುವ ಪ್ಲ್ಯಾನ್ ಇದೆ. ನಂತರ ಪ್ರೀ-ರೀಲೀಸ್ ಇವೆಂಟ್‌ಗೆ ಬೇರೆ ಭಾಷೆಯ ಪತ್ರಕರ್ತರನ್ನು ಇಲ್ಲಿಗೆ ಕರಿಸುವ ಪ್ಲ್ಯಾನ್ ನಡಿತಾ ಇದೆ. ತುಂಬಾ ಚನ್ನಾಗಿ ಸಿನಿಮಾ ಬಗ್ಗೆ ಹೊರಗಡೆ ಮಾತುಗಳು ಕೇಳಿ ಬರುತ್ತಿವೆ. ಒಂದೇ ದಿನ ಭಾರತ ಸೇರಿದಂತೆ ಆಸ್ಟ್ರೇಲಿಯಾ, ಅಮೆರಿಕ, ಲಂಡನ್, ಕೆನಡಾ ಮುಂತಾದ ದೇಶಗಳಲ್ಲೂ ಸಿನಿಮಾ ರೀಲೀಸ್ ಆಗಲಿದೆ’ ಎಂದರು. ವೇದಿಕೆಯಲ್ಲಿ ಮತ್ತೋರ್ವ ನಿರ್ಮಾಪಕ ಜಿ. ಮನೋಹರನ್ ಹಾಗೂ ಸಹ ನಿರ್ಮಾಪಕ ನವೀನ್ ಮನೋಹರನ್, ಲಹರಿ ವೇಲು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸಂಕಲನಕಾರ ವಿಜಯ್ ರಾಜ್ ಸಾಹಸ ನಿರ್ದೇಶಕರಾದ ರವಿ ವರ್ಮ ಹಾಗೂ ಚೇತನ್ ಮುಂತಾದವರು ತಮ್ಮ ಅನುಭವ ಹಂಚಿಕೊಂಡರು.