ಧಾರವಾಡ 31: ಶಾಲೆ-ಕಾಲೇಜುಗಳಲ್ಲಿ ದೇಶಭಕ್ತಿ, ಸೈನಿಕರ ತ್ಯಾಗ, ಬಲಿದಾನ, ಶೌರ್ಯ, ಸಾಹಸಗಳ ಬಗ್ಗೆ ನೈತಿಕ ಶಿಕ್ಷಣದ ಅವಧಿಯಲ್ಲಿ ಸೈನಿಕ ಪಾಠವನ್ನು ಕಲಿಸುವ ಬಗ್ಗೆ ಕೈಕೊಂಡ ಶಿವಮೊಗ್ಗಾ ಜಿಲ್ಲಾ ಸೈನಿಕರ ಮಂಡಳಿಯ ಹಾಗೂ ಜಿಲ್ಲಾಧಿಕಾರಿಗಳು ತೆಗೆದುಕೊಂಡ ನಿರ್ಧಾರವನ್ನು ಇಲ್ಲಿಯ ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಹಾಗೂ ಅಧ್ಯಕ್ಷ ಚಂದ್ರಶೇಖರ ಅಮೀನಗಡ ಅವರು ಸ್ವಾಗತಿಸಿದ್ದಾರೆ.
ಇಂದೊಂದು ಅಪರೂಪದ ವೈಶಿಷ್ಟ್ಯಪೂರ್ಣ ಯೋಜನೆಯಾಗಿದೆ ಎಂದು ಶ್ಲಾಘಿಸಿದ ಅವರು ಈ ಕಾರ್ಯಕ್ರಮಕ್ಕೆ ತಮ್ಮ ಸಮಿತಿಯು ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ.
'ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಶಾಲೆಯಲ್ಲಿ 5 ನೇ ವರ್ಗದ ವಿದ್ಯಾರ್ಥಿಗಳಿಂದ 10 ನೇ ವರ್ಗದ ವಿದ್ಯಾರ್ಥಿಗಳಿಗೆ ಸೈನಿಕ ಪಾಠವು ಅತ್ಯಗತ್ಯವಾಗಿದ್ದು, ಈಗಿರುವ ದೈಹಿಕ ಶಿಕ್ಷಣದ ಜೊತೆಗೆಯೇ ಸೈನಿಕ ಪಾಠವೂ ಬೋಧಿಸಿದಲ್ಲಿ, ಸೈನಿಕರ ಶಿಸ್ತು, ತ್ಯಾಗ, ಬಲಿದಾನ, ದೇಶಪ್ರೇಮ ಗುಣಗಳು ಬೆಳೆಯಲು ಮತ್ತು ಮಕ್ಕಳಲ್ಲಿ ದೇಶಭಕ್ತಿ ಪಸರಿಸಲು ಸಹಕಾರಿಯಾಗುತ್ತವೆ. ವೀರರ ಸಾಹಸಗಾಥೆಗಳು ಮಕ್ಕಳಿಗೂ ತಿಳಿದು, ಅವರಂತೆಯೇ ತಾವು ಆಗಬೇಕೆಂಬ ಆಸೆಯು ಮೂಡಲು ಸಹಾಯವಾಗುತ್ತದೆ.
ಸೈನಿಕ ಪಾಠವನ್ನು ನೀಡುವ ಈ ಯೋಜನೆಯು ಕೇವಲ ಶಿವಮೊಗ್ಗ ಜಿಲ್ಲೆಗೆ ಮೀಸಲಾಗಿಡದೆ, ಇಡೀ ರಾಜ್ಯದಲ್ಲಿರುವ ಎಲ್ಲಾ ಶಾಲೆ ಕಾಲೇಜುಗಳಲ್ಲಿಯೂ ಕಡ್ಡಾಯಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.