ಮನೆ ಕೇವಲ ಕಟ್ಟಡವಲ್ಲ ಅದೊಂದು ಪಾಠ ಶಾಲೆ : ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು

    ಮನೆ ಕೇವಲ ಕಟ್ಟಡವಲ್ಲ ಅದೊಂದು ಪಾಠ ಶಾಲೆ :  ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು A house is not just a building, it is a school of learning: Dr. Allama Prabhu Mahaswamy

ಲೋಕದರ್ಶನ ವರದಿ   

ಬೆಳಗಾವಿ 18: ನಮ್ಮ ಮಕ್ಕಳು ಯಾವ ದಾರಿಯಲ್ಲಿ ಸಾಗಬೇಕೆಂದು ಕೇವಲ ಶಾಲೆಗಳು, ಶಿಕ್ಷಣ ಸಂಸ್ಥೆಗಳು ನಿರ್ಧಾರ ಮಾಡಬಾರದು ಬದಲಿಗೆ ಇದರಲ್ಲಿ ಪಾಲಕರ ಪಾತ್ರ ಹಿರಿದಾಗಿರಬೇಕು. ಮಕ್ಕಳು ಕೇವಲ ಶಾಲಾ ಅವಧಿ ಹೊರತುಪಡಿಸಿ ದಿನದ ಬಹುತೇಕ ಸಮಯ ಮನೆಯಲ್ಲಿಯೇ ಇರುತ್ತಾರೆ. ಮಕ್ಕಳ ಆಸಕ್ತಿ, ಅಭಿರುಚಿ ತಂದೆ ತಾಯಿಗಳಿಗೆ ಹೆಚ್ಚು ತಿಳಿದಿರುತ್ತದೆ. ತಂದೆ ತಾಯಿಗಳನ್ನೇ ಆದರ್ಶವಾಗಿ ಇಟ್ಟುಕೊಂಡು ಅವರ ನಡೆ ನುಡಿ, ರೀತಿ ನೀತಿಗಳನ್ನು ನೋಡಿ ಮಕ್ಕಳು ಬೆಳೆಯುತ್ತಾರೆ. ಶಿಕ್ಷಣ ಸಂಸ್ಥೆ ಮಕ್ಕಳಿಗೆ ವಿದ್ಯೆ ಕಲಿಸಿದರೆ ಮನೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಪಾಠ ಕಲಿಸಬೇಕು. ಏಕೆಂದರೆ ಮನೆ ಅದು ಕೇವಲ ಕಟ್ಟಡವಲ್ಲ ಅದೊಂದು ಪಾಠ ಶಾಲೆ ಇದ್ದಂತೆ. ಇಲ್ಲಿ ತಾಯಿಯೆ ನಮ್ಮೆಲ್ಲರ ಮೊದಲ ಗುರು  ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.  ಅವರು ಇಂದು ನಾಗನೂರು ರುದ್ರಾಕ್ಷಿ ಮಠದ ಪ್ರಭುದೇವ ಸಭಾ ಗ್ರಹದಲ್ಲಿ ಹಮ್ಮಿಕೊಂಡಿದ್ದ ಜಿ.ಜಿ. ಯಳ್ಳೂರ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಮುಂದುವರೆದು ಮಾತನಾಡಿದ ಶ್ರೀಗಳು ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆ, ರೀತಿ, ನೀತಿ, ನಡೆ, ನುಡಿ ಕಲಿಸಿದರೆ ಮನೆಯಲ್ಲಿ ನಮ್ಮ ದೇಶದ ಸಂಸ್ಕೃತಿ ಹಾಗು ಸಂಸ್ಕಾರ ಕಲಿಸಬೇಕು. ಜಗತ್ತಿನ ಎಲ್ಲಾ ಕ್ಷೇತ್ರದಲ್ಲಿನ ಸಾಧನೆಗೆ ಮೂಲವೇ ಪ್ರಾಥಮಿಕ ಶಾಲೆಗಳು. ಇಲ್ಲಿ ಹಾಕಿಕೊಟ್ಟ ಅಡಿಪಾಯವೇ ಭವಿಷ್ಯ ನಿರ್ಮಾಣಕ್ಕೆ ನಾಂದಿಯಾಗುತ್ತದೆ. ವ್ಯಕ್ತಿ ಎಷ್ಟೇ ಸರ್ವಶ್ರೇಷ್ಠನಾದರೂ ಪ್ರಾಥಮಿಕ ಶಾಲೆಯಲ್ಲಿ ತನಗೆ ಕಲಿಸಿದ ಗುರುವನ್ನು  ಆತ ಎಂದಿಗೂ ಮರೆಯಲಾರ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚೆನ್ನಮ್ಮನ ಕಿತ್ತೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಹೇಶ ಚನ್ನಂಗಿ ಮಾತನಾಡಿ ಪಾಲಕರಾದವರು ಮಕ್ಕಳು  ಹೆಮ್ಮೆ ಪಡುವ ರೀತಿಯಲ್ಲಿ ಬದುಕಬೇಕು. ಮಕ್ಕಳ ಮುಂದೆ ಅಶ್ಲೀಲ ಪದಗಳ ಪ್ರಯೋಗ ಹಾಗೂ ದುಶ್ಚಟಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಭದ್ರತೆ ಹಾಗೂ ಬಲಿಷ್ಠವಾದ ಭಾವನೆಗಳನ್ನು ಕರಗತ ಮಾಡಿಸಬೇಕು. ಅವರ ಮುಂದೆ ಯಾವುದೇ ಕಾರಣಕ್ಕೂ ನಿರಾಸೆ ಮೂಡಿಸುವ  ಹಾಗೂ ನಕಾರಾತ್ಮಕ ವಿಚಾರಗಳನ್ನು ಹಂಚಿಕೊಳ್ಳಬಾರದು. ಇದು ಮಕ್ಕಳ ಮೇಲೆ ತೀವ್ರ ಪ್ರಭಾವ ಬೀರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಬಸಯ್ಯ ಶಿವಲಿಂಗಯ್ಯಗೋಳ, ಶಾಲೆಯ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ದೀಪಾ ಪಾಟೀಲ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಶಾಲೆಯ ಶಿಕ್ಷಕಿ ಶೃತಿ ಘಿವಾರಿ ಸ್ವಾಗತಿಸಿದರು ಸೀಮಾ ಇಂಚಲ ನಿರೂಪಿಸಿದರು ಕೊನೆಗೆ ನಾಗರತ್ನ ಅಂಗಡಿ ವಂದಿಸಿದರು.