ಶಶಿಧರ ಕುರೇರ್ ಅವರಿಗೆ ಅದ್ದೂರಿ ಬೀಳ್ಕೊಡುಗೆ; ಜಿಲ್ಲೆಯ ಜನರ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾಗದು

ಶಶಿಧರ ಕುರೇರ್ ಅವರಿಗೆ ಅದ್ದೂರಿ ಬೀಳ್ಕೊಡುಗೆ; ಜಿಲ್ಲೆಯ ಜನರ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾಗದು  A grand farewell to Shashidhar Kurer; The love and trust of the people of the district will never be

ಲೋಕದರ್ಶನ ವರದಿ 

ಬಾಗಲಕೋಟೆ 20 :  ಜಿಲ್ಲೆಯ ಅಭಿವೃದ್ದಿ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಳ್ಳಲು ಸಹಕರಿಸಿದ ಜನಪ್ರತಿನಿಧಿಗಳು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಜಿಲ್ಲೆಯ ಜನರ ಪ್ರೀತಿ, ವಿಶ್ವಾಸ ಹಾಗೂ ಸಹೋದ್ಯೋಗಿಗಳ ಬೆಂಬಲ ಎಂದಿಗೂ ಮರೆಯಲಾಗದು ಎಂದು ನಿಕಟಪೂರ್ವ ಜಿ.ಪಂ ಸಿಇಓ ಶಶಿಧರ ಕುರೇರ ಹೇಳಿದರು.  ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಮಂಗಳವಾರ ಸಂಜೆ ಜರುಗಿದ ಬೀಳ್ಕೊಡುಗೆ ಸಮಾರಂಭದಲ್ಲಿ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ, ಮಾತನಾಡಿದ ಅವರು ಬಾಗಲಕೋಟೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರದ ಹುದ್ದೆಯನ್ನು ವಹಿಸಿಕೊಂಡಾಗ ನನ್ನ ಮೇಲೆ ಗುರುತರವಾದ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಇತ್ತು.

ಆದರೆ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಗಳ ಸಹಕಾರದಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು. ಪ್ರತಿಯೊಂದು ಯಶಸ್ಸಿನ ಹಿಂದೆ ಎಲ್ಲರಶ್ರಮ ಇರುತ್ತದೆ ಎಂದು ತಿಳಿಸಿದರು. ಸರಕಾರಿ ಸೇವೆಗೆ ಸೇರಿದ ಬಳಿಕ ಸಮಾಜಕ್ಕೆ ಉತ್ತಮ ಸೇವೆ ನೀಡುವುದು ತಮ್ಮ ಜವಾಬ್ದಾರಿ. ಇದನ್ನು ಅರಿತು ನಾವು ಕೆಲಸ ಮಾಡಬೇಕಾಗುತ್ತದೆ. ಜಿಲ್ಲೆಯ ಅಭಿವೃದ್ದಿ ಹಿನ್ನಲೆಯಲ್ಲಿ ಈ ಹಿಂದಿನ ಹಾಗೂ ಇಂದಿನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಜೊತೆಯಾಗಿ ಕೆಲಸ ಮಾಡಿದ್ದೇನೆ. ಎಲ್ಲರೂ ಸಹಕಾರ ಕೊಟ್ಟಿದ್ದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು.  

ಜಿಲ್ಲೆಯಅಭಿವೃದ್ದಿ ಕಾರ್ಯಗಳಿಗೆ ದೊರೆತ ಪ್ರತಿಯೊಂದು ಪ್ರಶಸ್ತಿಗಳು ಕೇಲವ ನಮ್ಮ ಶ್ರಮವಲ್ಲ. ಇದಕ್ಕೆ ಶ್ರಮಿಸಿದ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿಗಳ ಶ್ರಮವಿದೆ ಎಂದರು. ಮುಖ್ಯವಾಗಿ ನನ್ನ ಮನಸ್ಸಿಗೆ ಹತ್ತಿರವಾದ ವಿಷಯವೆಂದರೆ, ಒಂದು ಶಿಕ್ಷಣ ಮತ್ತು ಇನ್ನೊಂದು ಕುಡಿಯುವ ನೀರು. ಹಲವಾರು ಯೋಜನೆಗಳು ರೂಪಿಸುವ ಮೂಲಕ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿ ದಿನ 24 ಗಂಟೆಗಳ ಕಾಲ ನೀರು ಪೂರೈಸುವ ಕೆಲಸ ಮಾಡಲಾಗಿದ್ದು, ಕೆಲವು ಗ್ರಾಮಗಳಲ್ಲಿ ಯಶಸ್ಸು ಕಂಡುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮಕ್ಕೂ ವಿಸ್ತರಿಸಿ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಬೇಕು. ಇದರ ಜೊತೆಗೆ ಶಿಸ್ತುಬದ್ದ ಕಚೇರಿ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.  

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ ಜಿಲ್ಲೆಯ ವಿವಿಧ  ಕ್ಷೇತ್ರಗಳಲ್ಲಿ ಅವರು ಮಾಡಿದ ಕಾರ್ಯಗಳು ಶ್ಲಾಘನೀಯವಾಗಿದ್ದು, ಜಿಲ್ಲಾಡಳಿತ ಜೊತೆಗೆ ಉತ್ತಮವಾಗಿ ಕೆಲಸ ಮಾಡಿ ಸಲಹೆ ನೀಡಿದ್ದಾರೆ. ಅಭಿವೃದ್ದಿಗೆ ಅವರ ನೀಡಿದ ಮಾರ್ಗದರ್ಶನ ಹಾಗೂ ಆಡಳಿತದ ಶೈಲಿ ಸದಾ ಸ್ಮರಣೀಯವಾಗಿರಲಿ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಯುಕೆಪಿ ಜಿಎಂ ಗಜಾನನ ಬಾಲೆ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ ಸೇರಿದಂತೆ ಇತರೆ ಅಧಿಕಾರಿಗಳು ಶಶಿಧರ ಕುರೇರ ಅವರ ಆಡಳಿತಾತ್ಮಕ ಸೇವೆ, ಅಭಿವೃದ್ದಿ ಯೋಜನೆಗಳ ಅನುಷ್ಠಾನ ಮತ್ತು ಜನಪರ ಕಾರ್ಯಗಳನ್ನು ಸ್ಮರಿಸಿದರು. ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ ಉಪ ಕಾರ್ಯದರ್ಶಿ ಎನ್‌.ವಾಯ್‌.ಬಸರಿಗಿಡದ, ಶಶಿಧರ ಕುರೇರ್ ಅವರು ಮೂರು ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಸ್ಮರಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಸೇರಿದಂತೆ ಜಿ.ಪಂ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.