ತಾಳಿಕೋಟಿ ಪಟ್ಟಣದಲ್ಲಿ ವಿಜೃಂಭಣೆಯ ಸ್ವಾತಂತ್ರ್ಯೋತ್ಸವ

ತಾಳಿಕೋಟಿ ಪಟ್ಟಣದಲ್ಲಿ ವಿಜೃಂಭಣೆಯ ಸ್ವಾತಂತ್ರ್ಯೋತ್ಸವ  A grand Independence Day celebration in Talikoti town


ತಾಳಿಕೋಟಿ 17 : ಪಟ್ಟಣದ ಸರ್ಕಾರಿ ಕನ್ನಡ ಶಾಲಾ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಶನಿವಾರ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಎಂ.ಎಸ್‌. ಅರಕೇರಿ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಹಾಗೂ ಬಲಿದಾನ ಮಾಡಿದ ಮಹನೀಯರನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಸ್ವಾತಂತ್ರ್ಯ ದೊರೆತ 80 ವರ್ಷಗಳಲ್ಲಿ ದೇಶವು ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದೆ. ಭಾರತದ ಜಿಡಿಪಿ ಬೆಳವಣಿಗೆ ವಿಶ್ವದ ಹಲವು ರಾಷ್ಟ್ರಗಳು ಭಾರತದತ್ತ ನೋಡುವಂತೆ ಮಾಡಿದೆ.

ಆದರೆ ಸಾಧಿಸಬೇಕಾದದ್ದು ಇನ್ನೂ ಬಹಳಷ್ಟಿದ್ದು, ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು. ಜಾತ್ಯತೀತ ನೆಲಗಟ್ಟಿನ ಮೇಲೆ ನಿಂತಿರುವ ಸ್ವತಂತ್ರ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ನೀತಿ, ಸಿದ್ಧಾಂತ ಮತ್ತು ತತ್ವಾದರ್ಶಗಳನ್ನು ನಿರಂತರವಾಗಿ ಎತ್ತಿಹಿಡಿಯಲು ದೇಶದ ನಾಗರಿಕರಾದ ನಾವು ಕಂಕಣಬದ್ಧರಾಗಬೇಕು ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಾಜಿ ಸೈನಿಕರು, ಕೃಷಿ ಕ್ಷೇತ್ರದ ಸಾಧಕರು ಹಾಗೂ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಪಿಎಸ್‌ಐಗಳಾದ ಜ್ಯೋತಿ ಖೋತ್ ಹಾಗೂ ಎಸ್‌.ಎಂ. ಪಡಶೆಟ್ಟಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್ಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ ಧ್ವಜವಂದನೆ ಸಲ್ಲಿಸಿದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನಸೂಯಾ ಚಲವಾದಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಮುಖ್ಯಸ್ಥರು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.