ಲೋಕದ ಹಿತಕ್ಕೆ ಮಿಡಿಯುವ ಮಹಾಂತೇಶ ಗೋನಾಲರ ಗಜಲ್

ನಭಕೆ ಹಾರಿದ ಹಕ್ಕಿಗಳು ನೆಲವ ಮರೆಯುತ್ತಿವೆ 

ಎಲ್ಲೆ ಮೀರಿದ ಆಸೆಗಳು ಬದುಕು ಒಡೆಯುತ್ತಿವೆ 

ಗಜಲ್ ಕವಿ ಮಹಾಂತೇಶ ಗೋನಾಲರ ಮೇಲಿನ ಈ ಎರಡು ಸಾಲುಗಳು ಎತ್ತರೆತ್ತರಕ್ಕೇರಿದವರು ನೆಲದ ನಂಟನ್ನು ಕಡೆಗಣಿಸಿ ಮೆರೆಯುತ್ತಿರುವುದಕ್ಕೆ, ಕೊನೆಯಿಲ್ಲದ ಆಸೆಗಳು ಬದುಕನ್ನೇ ತಿಂದು ತೇಗುತ್ತಿರುವುದರ ಬಗ್ಗೆ ಮಾರ್ಮಿಕವಾಗಿ ನುಡಿಯುತ್ತವೆ. ಮಹಾಂತೇಶ ಗೋನಾಲ ಅವರು ಮೂಲತಃ ಯಾದಗಿರಿಯ ಸುರಪುರ ತಾಲೂಕಿನ ದೇವರಗೋನಾಲದವರು. ಪ್ರಸ್ತುತ ಸರಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದೆಡೆಗೆ ತೀರದ ಒಲವನ್ನು ಇಟ್ಟುಕೊಂಡಿರುವ ಇವರು ‘ಮಹಾಂತ’ ಎಂಬ ಕಾವ್ಯನಾಮದ ಮೂಲಕ ಗಜಲ್ ಬರೆಯುತ್ತಿದ್ದಾರೆ. ಇದುವರೆಗೆ ದಣಿದ ಮೌನ ಹಾಗೂ ಚಾಡಮಾರಿ ಶಹರಗಳು ಎಂಬ ಎರಡು ಗಜಲ್ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ದಣಿದ ಮೌನ’ ಸಂಕಲನಕ್ಕೆ ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಧನಸಹಾಯ ಲಭಿಸಿದೆ. ದಲಿತ ಸಾಹಿತ್ಯ ಪರಿಷತ್ತಿನ ಮೊದಲ ಗಜಲ್ ಸಮ್ಮೇಳನದಲ್ಲಿ ಗಜಲ್ ವಾಚನ ಸೇರಿದಂತೆ ಅನೇಕ ಕಡೆ ಇವರು ಕವಿತೆ, ಗಜಲ್ ವಾಚನ ಮಾಡಿದ್ದಾರೆ. ಮಯೂರ ಸೇರಿದಂತೆ ಮುಂತಾದ ಪತ್ರಿಕೆಗಳಲ್ಲಿ ಇವರ ಗಜಲ್‌ಗಳು ಪ್ರಕಟಗೊಂಡಿವೆ. ಇವರ ರಚನೆಯ ಗಜಲ್‌ನ ಓದು ಮತ್ತು ವಿಶ್ಲೇಷಣೆ ನಿಮಗಾಗಿ. 

‘ಒಳಿತು ಮಾಡು ಮನುಷ್ಯಾ ನೀ ಇರೂದು ಮೂರೇ ದಿವಸಾ’ ಎಂದು ಅದೆಷ್ಟೇ ಭಾವತುಂಬಿ ನೀವು ಹಾಡಿದರೂ ಇಂದು ಒಳಿತು ಮಾಡುವ ಜನರು ಬಹಳ ಕಡಿಮೆ. ನಾಳೆಯೆಂಬುದು ಇರುತ್ತೋ ಇಲ್ಲವೋ ಎಂಬ ಧಾವಂತದಲ್ಲಿ, ಇರುವಷ್ಟು ದಿನ ಬದುಕನ್ನು ಚೆನ್ನಾಗಿ ಅನುಭವಿಸಿ ಹೋಗಬೇಕು ಎನ್ನುವ ಸಿದ್ಧಾಂತಕ್ಕೆ ಕಟ್ಟುಬಿದ್ದಿರುವವರ ತರಹ ವರ್ತಿಸುತ್ತಿರುವ ಈ ಜನ, ಇನ್ನು ಒಳಿತಿನ ಪಾಠ ಕೇಳಿಸಿಕೊಳ್ಳುವರೇ? ಕೆಡುಕಿಗೇ ತಲೆ ಕೊಡುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿರುವ ಇಂದಿನ ದಿನಮಾನದಲ್ಲಿ ಬದುಕಿನಲ್ಲಿ ನಾವೆಲ್ಲ ಏನನ್ನು ಕಲಿಯಬೇಕು, ಅಳವಡಿಸಿಕೊಳ್ಳಬೇಕು, ಎಂತಹ ಸಂದಿಗ್ಧ ಸ್ಥಿತಿಯಲ್ಲೂ ಸಮಚಿತ್ತತೆ ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಕುರಿತಾಗಿ ಅರಿವು ಬಿತ್ತುವ ಮಹಾಂತೇಶ ಗೋನಾಲರ ಈ ಗಜಲ್ ಕಲಿಯುವುದರ ಜೊತೆಗೆ ಕಲಿಸುವುದನ್ನು ಕಲಿಸಿಕೊಡುತ್ತದೆ. 

ನಾವಿರುವ ಈ ಜಗತ್ತು ತುಂಬ ವೈವಿಧ್ಯತೆಯಿಂದ ಕೂಡಿದೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಸವಾಲುಗಳು, ಆತಂಕ, ತಲ್ಲಣ, ಸೂತಕದ ಮೌನ, ಅಗಲಿಕೆಯ ಅನಿವಾರ್ಯತೆ, ಕಾಲೆಳೆವ ಮೋಜು, ಕತ್ತಲಿಗೆ ನೂಕುವ ದರ್ದು ಎಲ್ಲವೂ ಅನೀರೀಕ್ಷಿತವೇ. ಹಾಗಿದ್ದಲ್ಲಿ ಇವುಗಳ ಮಧ್ಯೆ ಹೇಗೆ ಬದುಕಬೇಕು? ಅದನ್ನೇ ಮಹಾಂತೇಶರ ಗಜಲ್ ಕಲಿಸುತ್ತದೆ. ಕಿವಿಗಡಚಿಕ್ಕುವ ಗದ್ದಲದೊಳಗೂ ಏಕಾಂತ ಕಲ್ಪಿಸಿಕೊಳ್ಳುವುದನ್ನು, ಹೃದಯಕ್ಕೆ ಹತ್ತಿರವಾದವರ ಗೈರು ಹಾಜರಿಯಲ್ಲೂ ಮೊಗದಲ್ಲಿ ಕಿರುನಗೆ ಅರಳಿಸುವುದನ್ನು ಕಲಿತರೆ ಸಾಕು. ಬದುಕಿನ ದಾರಿಗಳು ಯಾವಾಗ ಅನೀರೀಕ್ಷಿತ ತಿರುವನ್ನು ಪಡೆದುಕೊಳ್ಳುತ್ತದೋ, ಕೊನೆಗೊಳ್ಳುತ್ತದೋ ಗೊತ್ತಿಲ್ಲ, ಸಾವು ಸಮೀಪಿಸಿದ ಘಳಿಗೆಯಲ್ಲೂ ತೀವ್ರ ವ್ಯಾಮೋಹಿಯಂತೆ ಬದುಕನ್ನು ಪ್ರೀತಿಸಿದರೆ ಸಾಕು. ತನ್ನಷ್ಟಕ್ಕೆ ತಾನು ಹಾಡಿಕೊಳ್ಳುತ್ತಾ, ಸ್ವತಂತ್ರವಾಗಿ ಹಾರಾಡುವ ನಿರುಪದ್ರವಿ ಹಕ್ಕಿಗಳ ರೆಕ್ಕೆಯನ್ನೇ ಕತ್ತರಿಸಿ ಮೋಜು ನೋಡುವವರ ಕಾಲವಿದು, ತೈಲ ತೀರಿದ ಹಣತೆಗೂ ಬೆಳಕು ನೀಡುವುದು ಹೇಗೆ ಎಂದು ಕಲಿಸಿದರೆ ಸಾಕು. ಸದಾ ಕೇಡು ಬಯಸುವ ದುರ್ಜನರ ನೆರಳುಗಳು ಬೆನ್ನ ಹಿಂದೆಯೇ ಇವೆ ಆದರೂ ಕತ್ತಲ ಬಾಳಿನಲ್ಲಿ ಮಿಣುಕು ದೀಪವಾಗಿ ಬೆಳಗಿದರೆ ಸಾಕು. ಜಗತ್ತಿನ ಯಾವ ಪ್ರೇಮಿಗಳನ್ನೂ ವಿರಹ ವೇದನೆ ಸುಮ್ಮನೆ ಬಿಟ್ಟಿಲ್ಲ. ಆದರೆ ಅಂತಹ ವಿರಹದುರಿಯ ಬೆಂಕಿಯಲ್ಲೂ ನಲಿಯುವುದ ಕಲಿತುಕೊಂಡರೆ ಸಾಕು ಎನ್ನುವ ಗೋನಾಲ ಅವರ ಗಜಲ್ ಸದಾ ಒಳಿತಿನ ಪರ ಮಿಡಿಯುತ್ತದೆ. ಲೋಕ ಕಲ್ಯಾಣಕ್ಕೆ ಹಂಬಲಿಸುತ್ತ, ಎಲ್ಲ ವಿಷಾದ, ನೋವುಗಳನ್ನು ದಾಟಿಸುತ್ತದೆ.  

ಕಾವ್ಯ ಸದಾ ಲೋಕದ ಹಿತಕ್ಕೆ ಮಿಡಿಯಬೇಕು. ಅನ್ಯಾಯಕ್ಕೆ ಪ್ರತಿಭಟಿಸಬೇಕು. ದುಃಖಕ್ಕೆ ಕಣ್ಣೀರಾಗಬೇಕು. ನೋವುಂಡರೂ ನಗು ಚೆಲ್ಲುತ್ತಿರಬೇಕು. ಅಂತಹ ಎಲ್ಲ ಆಶಯಗಳನ್ನು ಮಹಾಂತೇಶ ಗೋನಾಲ ಅವರ ಈ ಗಜಲ್ ಅಭಿವ್ಯಕ್ತಿಸುತ್ತದೆ. ಅವರಿಗೆ ವಂದನೆಗಳು.   

- * * * -