ಲೋಕದರ್ಶನವರದಿ
ಹಾವೇರಿ೧೯: ಉತ್ತರ ಕರ್ನಾಟಕದ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿರುವ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸೊಗಡಿನ ಮನರಂಜನಾ ಹಬ್ಬವಾಗಿರುವ ಕಾರ ಹುಣ್ಣಿಮೆಯನ್ನು ಸೋಮವಾರ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ರೈತರು ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಎತ್ತುಗಳ ಕರಿ ಹರಿಯುವ ಮೂಲಕ ಕಡು ಬೇಸಿಗೆ ಕಳೆದು ಮುಂಗಾರು ಸ್ವಾಗತಿಸಲು ಈ ಹಬ್ಬ ಸಾಕ್ಷಿಯಾಯಿತು. ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು, ಬಣ್ಣ ಹಚ್ಚಿ ಶೃಂಗರಿಸಿ ಸಂಜೆ ಹಮ್ಮಿಕೊಂಡ ಕರಿ ಹರಿಯುವ ದೃಶ್ಯ ರೋಮಾಂಚನಗೊಳಿಸಿತು.
ವರ್ಷವಿಡೀ ದುಡಿಯುವ ಎತ್ತುಗಳಿಗೆ ಮನರಂಜನಾ ಕೂಟವಾಗಿರುವ ಕಾರ ಹುಣ್ಣಿಮೆ ನಿಮಿತ್ತ ವಿಶೇಷ ಅಲಂಕಾರ ಹಾಗೂ ಭಕ್ಷ್ಯಗಳನ್ನು ಉಣಿಸುವ ಸಂಪ್ರದಾಯ ಉತ್ತರ ಕನರ್ಾಟಕದಾದ್ಯಂತ ರೂಢಿಯಲ್ಲಿದೆ. ಆದ್ದರಿಂದ ಎತ್ತುಗಳ ಕರಿ ಹರಿಯುವ ವಿಶಿಷ್ಠ ಆಚರಣೆಗೆ ನೂರಾರು ರೈತರು ಹಾಗೂ ಯುವಕರು ಸಾಕ್ಷಿಯಾದರು.
ಶೃಂಗರಿಸಿ ಕರೆತಂದಿದ್ದ ತಮ್ಮ ಎತ್ತುಗಳನ್ನು ಸಾಲು ಸಾಲಾಗಿ ಓಡಿಸುತ್ತ ಸಂಭ್ರಮಪಟ್ಟ ರೈತರು ನಂತರ ಮನೆಗೆ ಬಂದಾಗ ಅವುಗಳಿಗೆ ಆರತಿ ಎತ್ತಿ ಖುಷಿ ಪಟ್ಟರು. ಇದಕ್ಕೂ ಮೊದಲು ಮಹಿಳೆಯರು ಕಾರ ಹುಣ್ಣಿಮೆ ನಿಮಿತ್ತ ವಿಶೇಷ ಪೂಜೆ ನೆರವೇರಿಸಿದರು. ಹಬ್ಬದ ಅಂಗವಾಗಿ ಮನೆಯಲ್ಲಿ ವಿಶೇಷ ಸಿಹಿ ಖಾದ್ಯಗಳನ್ನು ತಯಾರಿಸಲಾಗಿತ್ತು.
ಇದೇ ವೇಳೆಯಲ್ಲಿ ರಾಮನಗೌಡ ಲೆಕ್ಕನಗೌಡ್ರ, ಶಿವನಗೌಡ ವಿ ಎಲ್, ಬಸವರಾಜ ರಿತ್ತಿ, ಶ್ರೀಕಾಂತ ಹನುಮಗೌಡ್ರ, ಸುನೀಲ ಬಂಕಾಪುರ, ಕನಕಪ್ಪ ದಾಸಣ್ಣನವರ, ನಂದೀಶ್ ಮುಂತಾದ ಯುವಕರ ಗುಂಪು ಹೋರಿಗಳ ಕರಿ ಹರಿಯುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು.