ಶಿಸ್ತು, ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ

ಶಿಸ್ತು, ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ  A bright future for students through discipline and hard work

ಲೋಕದರ್ಶನ ವರದಿ 

ಹುಲಕೋಟಿ, ಆ.22: ಶಾಲೆ-ಕಾಲೇಜುಗಳು ಕೇವಲ ಪಾಠ ಕಲಿಸುವ ಕೇಂದ್ರಗಳಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಪ್ರತಿಭಾ ಅನಾವರಣ ಹಾಗೂ ಭವಿಷ್ಯ ನಿರ್ಮಾಣಕ್ಕೆ ದಾರೀದೀಪವಾಗಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಆತ್ಮೀಯ ಹಾಗೂ ವಿಶ್ವಾಸಪೂರ್ಣ ಸಂಬಂಧವು ಶೈಕ್ಷಣಿಕ ಪ್ರಗತಿಯ ಜತೆಗೆ ಉತ್ತಮ ನಾಗರಿಕರನ್ನು ರೂಪಿಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಾಚಾರ್ಯ ಡಾ. ಅಪ್ಪಣ್ಣ ಹಂಜೆ ಹೇಳಿದರು.  ಹುಲಕೋಟಿಯ ಶ್ರೀ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನಲ್ಲಿ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ದಿಕ್ಸೂಚಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಅವರ ಪ್ರತಿಭೆ ಹಾಗೂ ಆಸಕ್ತಿಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಶಿಕ್ಷಣ ಸಂಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಕಾಲೇಜನ್ನು ತಮ್ಮದೇ ಕುಟುಂಬವೆಂದು ಭಾವಿಸಿ ಶಿಸ್ತು, ಸಮಯಪಾಲನೆ, ಉತ್ತಮ ನಡವಳಿಕೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  ಕಾರ್ಯಕ್ರಮದ ಸಂಘಟಕ ಹಾಗೂ ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ವಿವಿಧ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.  

ಕುಮಾರಿ ಪ್ರಜ್ಞಾ ವರ್ಣೇಕರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಲಾ ವಿಭಾಗದ ಮುಖ್ಯಸ್ಥ ಮಹಾನಂದ ಹಿರೇಮಠ ಸ್ವಾಗತಿಸಿದರು. ಐಕ್ಯೂಎಸಿ ಸಹ ಸಂಯೋಜಕ ಡಾ. ಮಂಜುನಾಥ ತ್ಯಾಳಗಡಿ, ಉದ್ಯೋಗ ಮಾಹಿತಿ ಕೋಶದ ಸಂಯೋಜಕ ಡಾ. ಶ್ರೀಶವಿಠ್ಠಲ ಡಿ., ಎನ್‌ಎಸ್‌ಎಸ್ ಘಟಕದ ಸಂಯೋಜಕ ವಿಜಯಕುಮಾರ ಎಸ್‌., ಹೊಸ ದಿಗಂತ ಕಾರ್ಯಕ್ರಮದ ಸಂಯೋಜಕ ಹುಸೇನಭಾಷಾ, ಶಿಸ್ತು ಸಮಿತಿ ಸಂಯೋಜಕ ಮಹಾಂತೇಶ ಹಾಗೂ ರೆಡ್ಕ್ರಾಸ್ ಸಂಯೋಜಕ ಭೀಮೇಶ ಅವರು ಕಾಲೇಜಿನ ಶೈಕ್ಷಣಿಕ ಮತ್ತು ವಿವಿಧ ಘಟಕಗಳ ಕಾರ್ಯವೈಖರಿ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.  ಆಂತರಿಕ ಪರೀಕ್ಷಾ ವಿಭಾಗದ ಸಂಯೋಜಕ ಮನೋಜಕುಮಾರ ಜೋತಾವರ ವಂದಿಸಿದರು. ಸಂಯೋಜಕಿ ಸಾವಿತ್ರಿ ಟಿ. ಕಾರ್ಯಕ್ರಮ ನಿರ್ವಹಿಸಿದರು.