ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 9,093.60 ಕೋಟಿ ರೂ. ಹೂಡಿಕೆ ಮಾಡಲಿರುವ ಅಬುದಾಬಿಯ ಮುಬಾದಲ

ಮುಂಬಯಿ, ಜೂ. 5,ಅಬುಧಾಬಿ ಮೂಲದ ಸಾರ್ವಭೌಮ ಹೂಡಿಕೆದಾರ ಸಂಸ್ಥೆ ಮುಬಾದಲ ಇನ್‌ವೆಸ್ಟ್‌ಮೆಂಟ್ ಕಂಪನಿ (ಮುಬಾದಲ) ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 9,093.60 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಇಂದು ಘೋಷಿಸಿವೆ. ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಮುಬಾದಲ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಶೇ.1.85ರಷ್ಟು ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ.ಈ ಹೂಡಿಕೆಯೊಂದಿಗೆ, ಆರು ವಾರಗಳಿಗೂ ಕಡಿಮೆ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್ ಹಾಗೂ ಮುಬಾದಲ ಸೇರಿದಂತೆ ಪ್ರಮುಖ ತಂತ್ರಜ್ಞಾನ ಹಾಗೂ ಬೆಳವಣಿಗೆ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 87,655.35 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ.ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದ್ದು, ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ. ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.  

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, “ಭಾರತದ ಡಿಜಿಟಲ್ ಬೆಳವಣಿಗೆಯನ್ನು ಜಗತ್ತಿನ ಪ್ರಮುಖ ಡಿಜಿಟಲ್ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ಮುನ್ನಡೆಸುವ ನಮ್ಮ ಪ್ರಯಾಣದಲ್ಲಿ ಪಾಲುದಾರರಾಗಲು ಅತ್ಯಂತ ಚುರುಕಿನ ಮತ್ತು ಜಾಗತಿಕ ಮಟ್ಟದ ಪರಿವರ್ತಕ ಬೆಳವಣಿಗೆಯ ಹೂಡಿಕೆದಾರ ಸಂಸ್ಥೆಗಳಲ್ಲೊಂದಾದ ಮುಬಾದಲ ನಿರ್ಧರಿಸಿರುವುದು ತಮಗೆ ಸಂತಸ ತಂದಿದೆ. ಅಬುಧಾಬಿಯೊಂದಿಗಿನ ನನ್ನ ದೀರ್ಘಕಾಲದ ಸಂಬಂಧದ ಮೂಲಕ, ಯುಎಇಯ ಜ್ಞಾನಾಧಾರಿತ ಆರ್ಥಿಕತೆಯನ್ನು ಬಹುಮುಖವಾಗಿ ಬೆಳೆಸುವಲ್ಲಿ ಹಾಗೂ ಜಾಗತಿಕ ಸಂಪರ್ಕಗಳನ್ನು ಏರ್ಪಡಿಸುವಲ್ಲಿ ಮುಬಾದಲದ ಕೆಲಸಗಳ ಪ್ರಭಾವವನ್ನು ನಾನು ವೈಯಕ್ತಿಕವಾಗಿ ಕಂಡಿದ್ದೇನೆ. ಮುಬಾದಲ ಸಂಸ್ಥೆಯ ಅನುಭವ ಮತ್ತು ಪ್ರಪಂಚದಾದ್ಯಂತ ಬೆಳವಣಿಗೆಯ ಪಯಣಗಳನ್ನು ಬೆಂಬಲಿಸಿದ್ದರ ಒಳನೋಟಗಳಿಂದ ಪ್ರಯೋಜನ ಪಡೆಯುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ." ಎಂದು ಹೇಳಿದ್ದಾರೆ.ಮುಬಾದಲ ಇನ್ವೆಸ್ಟ್‌ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಸಿಇಓ ಖಲ್ದೂನ್ ಅಲ್ ಮುಬಾರಕ್, "ನಿರ್ಣಾಯಕ ಸವಾಲುಗಳನ್ನು ಎದುರಿಸಲು ಮತ್ತು ಹೊಸ ಅವಕಾಶಗಳನ್ನು ತೆರೆದಿಡಲು ನೆರವಾಗುವ ತಂತ್ರಜ್ಞಾನಗಳನ್ನು ರೂಪಿಸುತ್ತಿರುವ ಉನ್ನತ ಬೆಳವಣಿಗೆಯ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಮತ್ತು ಅವರೊಡನೆ ಸಕ್ರಿಯವಾಗಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ಜಿಯೋ ಈಗಾಗಲೇ ಭಾರತದಲ್ಲಿ ಸಂವಹನ ಮತ್ತು ಸಂಪರ್ಕವನ್ನು ಹೇಗೆ ಪರಿವರ್ತಿಸಿದೆ ಎನ್ನುವುದನ್ನು ನಾವು ನೋಡಿದ್ದೇವೆ, ಹಾಗೂ ಹೂಡಿಕೆದಾರ ಮತ್ತು ಪಾಲುದಾರರಾಗಿ, ಭಾರತದ ಡಿಜಿಟಲ್ ಬೆಳವಣಿಗೆಯ ಪಯಣವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಜಿಯೋ ಹೂಡಿಕೆದಾರರು ಮತ್ತು ಪಾಲುದಾರರ ಜಾಲದೊಂದಿಗೆ, ಪ್ಲಾಟ್‌ಫಾರ್ಮ್ ಸಂಸ್ಥೆಯು ಡಿಜಿಟಲ್ ಆರ್ಥಿಕತೆಯ ಅಭಿವೃದ್ಧಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನಾವು ನಂಬುತ್ತೇವೆ." ಎಂದು ಹೇಳಿದ್ದಾರೆ.ಜಾಗತಿಕ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ನಿರ್ಣಾಯಕ ಸವಾಲುಗಳನ್ನು ಎದುರಿಸುವ ಕ್ಷೇತ್ರಗಳಲ್ಲಿ ಅಬುಧಾಬಿಯ ವೈವಿಧ್ಯಮಯ, ಜಾಗತಿಕವಾಗಿ ಸಂಯೋಜಿತ ಆರ್ಥಿಕತೆಯನ್ನು ಮುನ್ನಡೆಸಲು ಮುಬಾದಲ ಹೂಡಿಕೆಗಳನ್ನು ಮತ್ತು ಪಾಲುದಾರಿಕೆಗಳನ್ನು ಕೈಗೊಳ್ಳುತ್ತದೆ. ಕಾಗ್ನಿಟಿವ್ ಕಂಪ್ಯೂಟಿಂಗ್, ಐಸಿಟಿ ಮೂಲಸೌಕರ್ಯ, ಟೆಲಿಕಾಂಗಳು ಮತ್ತು ಉಪಗ್ರಹ ಕಾರ್ಯಾಚರಣೆಗಳನ್ನು ಒಳಗೊಂಡಿರುವ ಪರಿವರ್ತಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಹೂಡಿಕೆಗಳು ಇದರ ಪ್ರಮುಖ ಭಾಗವಾಗಿದೆ.ನಾವೀನ್ಯತೆ ಮತ್ತು ತಂತ್ರಜ್ಞಾನದ ಬಗೆಗಿನ ತನ್ನ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಲು, ದೂರದೃಷ್ಟಿಯಿರುವ ಸಂಸ್ಥಾಪಕರೊಂದಿಗೆ ಮುಂಚಿತವಾಗಿಯೇ ಪಾಲುದಾರಿಕೆ ಮಾಡಿಕೊಳ್ಳಲು ಮತ್ತು ನವೀನ ವ್ಯವಹಾರಗಳಿಗೆ ಬೆಂಬಲ ನೀಡಲು 2017ರಲ್ಲಿ ಮುಬಾದಲ ತನ್ನ ವೆಂಚರ್ಸ್ ವಿಭಾಗವನ್ನು ಸ್ಥಾಪಿಸಿತು. ಮುಬಾದಲ ವೆಂಚರ್ಸ್ ವ್ಯವಹಾರವು ಪ್ರಸ್ತುತ ಅಮೆರಿಕಾ, ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಹಲವಾರು ವೆಂಚರ್ ಫಂಡ್‌ಗಳನ್ನು ನಿರ್ವಹಿಸುತ್ತಿದೆ.

ಇಂದು, ಮುಬಾದಲ ಅವರ ಹೂಡಿಕೆಗಳು ಸುಧಾರಿತ ಉತ್ಪಾದನೆ, ಅರೆವಾಹಕಗಳು, ಲೋಹಗಳು ಮತ್ತು ಗಣಿಗಾರಿಕೆ, ಔಷಧೀಯ ಮತ್ತು ವೈದ್ಯಕೀಯ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಮತ್ತು ಯುಟಿಲಿಟಿಗಳು ಹಾಗೂ ವೈವಿಧ್ಯಮಯ ಹಣಕಾಸು ಬಂಡವಾಳ ಪತ್ರಗಳ ನಿರ್ವಹಣೆಯನ್ನು ವ್ಯಾಪಿಸಿದೆ.   ಈ ವಹಿವಾಟು, ನಿಯಂತ್ರಕರ ಹಾಗೂ ಮತ್ತಿತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.ರಿಲಯನ್ಸ್ ಇಂಡಸ್ಟ್ರೀಸ್‌ಗೆ ಹಣಕಾಸು ಸಲಹೆಗಾರರಾಗಿ ಮೋರ್ಗನ್ ಸ್ಟಾನ್ಲಿ ಹಾಗೂ ವಕೀಲರಾಗಿ ಎಜ಼ೆಡ್‌ಬಿ ಆಂಡ್ ಪಾರ್ಟ್‌ನರ್ಸ್ ಹಾಗೂ ಡೇವಿಸ್ ಪೋಲ್ಕ್ ಆಂಡ್ ವಾರ್ಡ್‌ವೆಲ್ ಈ ವಹಿವಾಟಿಗೆ ಸಲಹೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.