ನವದೆಹಲಿ, ಮೇ13, ಕಳೆದ ಆರು ದಿನಗಳಿಂದ (ಮೇ 7ರಿಂದ) ವಂದೇ ಭಾರತ್ ಕಾರ್ಯಾಚರಣೆಯಡಿ ಏರ್‍ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‍ಪ್ರೆಸ್ ನ 43 ವಿಮಾನಗಳ ಮೂಲಕ 8503 ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ.ಮೇ 7ರಂದು ಭಾರತ ಸರ್ಕಾರ ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ವಾಪಸ್ ತರುವ ಅತಿದೊಡ್ಡ ಕಾರ್ಯಕ್ರಮ ‘ವಂದೇ ಭಾರತ್’ ಅನ್ನು ಆರಂಭಿಸಿತ್ತು.
ಈ ಯೋಜನೆಯಡಿ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ನಾಗರಿಕ ವಿಮಾನಯಾನ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಾಜ್ಯಸರ್ಕಾರಗಳೊಂದಿಗೆ ಸಮನ್ವಯತೆ ಹೊಂದಿದೆ.
ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್‍ಪ್ರೆಸ್ 64 ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ. ಇದರಲ್ಲಿ ಏರ್ ಇಂಡಿಯಾದ 42, ಏರ್ ಇಂಡಿಯಾ ಎಕ್ಸ್‍ಪ್ರೆಸ್‍ನ 24 ವಿಮಾನಗಳು ಸೇರಿವೆ. ಮೊದಲ ಹಂತದಲ್ಲಿ ಅಮೆರಿಕ, ಯುನೈಟೆಡ್ ಕಿಂಗಡಮ್, ಬಾಂಗ್ಲಾದೇಶ, ಸಿಂಗಾಪುರ, ಸೌದಿ ಅರೇಬಿಯಾ, ಕುವೈತ್, ಫಿಲಿಪೈನ್ಸ್,ಯುಎಇ ಮತ್ತು ಮಲೇಶಿಯಾದಲ್ಲಿನ 14,800 ಭಾರತೀಯರನ್ನು ಕರೆತರುವ ಯೋಜನೆ ಇದಾಗಿದೆ. ಮಹಾ ಸ್ಥಳಾಂತರವೆನಿಸಿದ ಈ ಕಾರ್ಯಕ್ರಮದಲ್ಲಿ ವಿಮಾನಗಳ ಪ್ರತಿ ಹಾರಾಟದಲ್ಲೂ ಸರ್ಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಚಿಸಿರುವ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳು, ಸ್ವಚ್ಛತಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಟಣೆ ಬುಧವಾರ ತಿಳಿಸಿದೆ.