ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ: 8 ಮಂದಿ ಸಾವು

ಅಫ್ಘಾನಿಸ್ತಾನ, ಫೆ 15 :   ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯವಾದ ನಂಗರ್‌ಹಾರ್‌ನಲ್ಲಿ ಶುಕ್ರವಾರ ನಡೆದ ವೈಮಾನಿಕ ದಾಳಿಯಲ್ಲಿ ಓರ್ವ ಮಗು ಸೇರಿದಂತೆ ಎಂಟು ಸ್ಥಳೀಯ ಗ್ರಾಮಸ್ಥರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.  

‘ಶುಕ್ರವಾರ ಸಂಜೆ ಸುರ್ಖ್ ರಾಡ್ ಜಿಲ್ಲೆಯಲ್ಲಿ ಗ್ರಾಮಸ್ಥರನ್ನು ಕರೆದೊಯ್ಯುತ್ತಿದ್ದ  ಎರಡು ವಾಹನಗಳ ಮೇಲೆ ವಿಮಾನದಿಂದ ಕ್ಷಿಪಣಿ ಮೂಲಕ ದಾಳಿ ನಡೆಸಲಾಗಿದೆ.  ದಾಳಿಗೆ ಮುನ್ನ ನತದೃಷ್ಟರು ಸ್ಥಳೀಯ ಬಜಾರ್‌ನಿಂದ ಹಿಂದಿರುಗುತ್ತಿದ್ದರು.’ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಕ್ಸಿನ್ಹುವಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.  

 ಈ ಮಧ್ಯೆ, ನ್ಯಾಟೋ ನೇತೃತ್ವದ ಸಮ್ಮಿಶ್ರ ಪಡೆಗಳು ಸುರ್ಖ್ ರಾಡ್‌ನಲ್ಲಿ ಎರಡು ವಾಹನಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿವೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಅಟ್ಟೌಲ್ಲಾ ಖೋಗಿಯಾನಿ ಕ್ಸಿನ್‌ಹುವಾ ತಿಳಿಸಿದ್ದಾರೆ. 

‘ಸ್ಥಳೀಯ ಅಧಿಕಾರಿಗಳು ಘಟನೆ ನಡೆದ ಗ್ರಾಮಕ್ಕೆ ಭೇಟಿ ನೀಡಿದ್ದು,  ಆರಂಭಿಕ ಮಾಹಿತಿಯಂತೆ ನತದೃಷ್ಟರು ಗ್ರಾಮಸ್ಥರು ಎಂದು ತಿಳಿದುಬಂದಿದೆ. ಆದರೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಮಯ ಬೇಕಾಗುತ್ತದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಲಾಗುವುದು. ಮೃತಪಟ್ಟವರಲ್ಲಿ ಒಂದು ಮಗು ಸಹ ಸೇರಿದ್ದು, ದಾಳಿಗಳಲ್ಲಿ ಎರಡು ವಾಹನಗಳು ಸಹ ಹಾನಿಗೊಂಡಿವೆ ಎಂದು ಅವರು ಹೇಳಿದ್ದಾರೆ.  

2019 ರಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ದಾಳಿ ಮತ್ತು ಘರ್ಷಣೆ ಘಟನೆಗಳಲ್ಲಿ 2,817 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 7,955 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಸ್ವತಂತ್ರ ಮಾನವ ಹಕ್ಕುಗಳ ಆಯೋಗ (ಎಐಎಚ್‌ಆರ್‌ಸಿ) ತಿಳಿಸಿದೆ.