ಗ್ರಾಮೀಣ ರಸ್ತೆಗಳ ಸುಧಾರಣೆಗೆ "ಗ್ರಾಮೀಣ ಸುಮಾರ್ಗ ಯೋಜನೆ" ಜಾರಿ; 780 ಕೋಟಿ ರೂ. ಮೀಸಲು: ಯಡಿಯೂರಪ್ಪ

ಬೆಂಗಳೂರು, ಮಾ.5, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯು 2020-21ನೇ ಸಾಲಿನಲ್ಲಿ ಮುಕ್ತಾಯಗೊಳ್ಳಲಿದೆ. ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಹೊಸದಾಗಿ "ಗ್ರಾಮೀಣ ಸುಮಾರ್ಗ ಯೋಜನೆ"ಯನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ. ಇದರಡಿ ಮುಂದಿನ ಐದು ವರ್ಷಗಳಲ್ಲಿ 20,000 ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ 2020-21ನೇ ಸಾಲಿನಲ್ಲಿ 780 ಕೋಟಿ ರೂ. ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ವಿಧಾನಸಭೆಯಲ್ಲಿಂದು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಅವರು, “ಜಲಧಾರೆ” ಯೋಜನೆಯಡಿಯಲ್ಲಿ Asian Infrastructure Investment Bank (AIIB) ನೆರವಿನೊಂದಿಗೆ 700 ಕೋಟಿ ರೂ. ವೆಚ್ಚದಲ್ಲಿ ವಿಜಯಪುರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೃಹತ್ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗುವುದು.  ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಮತ್ತು ರಾಜ್ಯದ ಸಂಪನ್ಮೂಲ ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು “ಮನೆ ಮನೆಗೆ ಗಂಗೆ” ನೂತನ ಯೋಜನೆ ಜಾರಿ ತರಲಾಗುವುದು ಎಂದು ತಿಳಿಸಿದರು.ಗ್ರಾಮೀಣ ಮತ್ತು ನಗರ ಪ್ರದೇಶಗಳ ನೀರು ಪೂರೈಕೆ ಸಮನ್ವಯಕ್ಕೆ ಸಮಗ್ರ ನೀತಿ ಜಾರಿ ಮಾಡಿ, ಒಂದೇ ಸಚಿವಾಲಯದಡಿ ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳ ಸೇರ್ಪಡೆ ಮಾಡಲಾಗುವುದು.  ರಾಜ್ಯದ 17 ನದಿ ಪಾತ್ರದ ಮಲಿನತೆಯನ್ನು ತಡೆಗಟ್ಟಲು 1690 ಕೋಟಿ ರೂ. ಮೊತ್ತದಲ್ಲಿ 20 ನಗರ ಪ್ರದೇಶಗಳ ಒಳಚರಂಡಿ ವ್ಯವಸ್ಥೆ ಹಾಗೂ ಒಂದು ಪಟ್ಟಣಕ್ಕೆ ಮಲತ್ಯಾಜ್ಯ ಸಂಸ್ಕರಣಾ ಘಟಕ(Faecal Sludge and Septage Management) ಅಳವಡಿಕೆಗೆ ಕ್ರಮ, 100 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.ಬಳ್ಳಾರಿ, ಚಿತ್ರದುರ್ಗ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶದ ಮರುಬಳಕೆಗೆ 20 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗುವುದು.  ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕಾರ್ಯಕ್ರಮ ಜಾರಿ ಮಾಡಲಾಗುವುದು.  ಕರ್ನಾಟಕ ನಗರ ವೀಕ್ಷಣಾಲಯದ (KARNATAKA URBAN OBSERVATORY) ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆ ಮುಂದುವರಿಸಲಾಗುವುದು, ಇದಕ್ಕಾಗಿ 3060 ಕೋಟಿ ರೂ. ಅನುದಾನ ಮೀಸಲಿಡಲಾಗುವುದು.  ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ಕೋಟಿ ರೂ.ನೀಡಲಾಗುವುದು  ಹೊಸದಾಗಿ ರಚಿಸಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಚಟುವಟಿಕೆಗಳಿಗೆ ಮುಂದಿನ ವರ್ಷಗಳಲ್ಲಿ 500 ಕೋಟಿ ರೂ ನೀಡಲಾಗುವುದು. ಪಂಚಾಯತ್ ಸಂಸ್ಥೆಗಳ ವಿಕೇಂದ್ರೀಕರಣ ಮತ್ತು ಬಲವರ್ಧನೆಗೆ ಪಂಚಾಯತ್ರಾಜ್ ಆಯುಕ್ತಾಲಯ ಪ್ರಾರಂಭಿಸಲಾಗುವುದು ಎಂದು ಯಡಿಯೂರಪ್ಪ ಪ್ರಕಟಿಸಿದರು.