ಕಾಬೂಲ್, ಅ 19: ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ನಡೆದ ಎರಡು ಸ್ಫೋಟಗಳಲ್ಲಿ ಕನಿಷ್ಠ 62 ಜನರು ಸಾವನ್ನಪ್ಪಿದ್ದು, ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪ್ರಾಂತೀಯ ಸರ್ಕಾರ ತಿಳಿಸಿದೆ. ನಂಗರ್ಹಾರ್ನ ಹಸ್ಕಾಮೈನಾ ಜಿಲ್ಲೆಯ ಜಾವ ದಾರಾ ಪ್ರದೇಶದ ಮಸೀದಿಯಲ್ಲಿ ಶುಕ್ರವಾರ ಸುಮಾರು 1.30 ಗಂಟೆಗೆ ಈ ಘಟನೆ ನಡೆದಿದೆ ಎಂದು ನಂಗರ್ಹಾರ್ ಗವರ್ನರ್ ವಕ್ತಾರ ಅತಾವುಲ್ಲಾ ಖೋಗ್ಯಾನಿ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಸ್ಫೋಟಕಗಳನ್ನು ಮಸೀದಿಯೊಳಗೆ ಇರಿಸಲಾಗಿತ್ತು. ಜನರು ಪ್ರಾರ್ಥನೆಯಲ್ಲಿ ನಿರತರಾಗಿದ್ದಾಗ ಇವನ್ನು ಸ್ಫೋಟಿಸಲಾಗಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ. ಅಧ್ಯಕ್ಷ ಘನಿ ಅವರ ವಕ್ತಾರ ಸಿದಿಕ್ ಸಿದ್ದಕಿ ಟ್ವೀಟ್ನಲ್ಲಿ ಸ್ಫೋಟ ಘಟನೆಗಳನ್ನು ತೀವ್ರವಾಗಿ ಖಂಡಿಸಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದನ್ನು ತಾಲಿಬನ್ ಮುಂದುವರೆಸಿದೆ ಎಂದು ಹೇಳಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಹೊತ್ತಿಲ್ಲ. ಆದರೂ, ತಾಲಿಬನ್ ಮತ್ತು ಇಸ್ಲಾಮಿಕ್ ಸ್ಟೇಟ್ ಎರಡೂ ಸಂಘಟನೆಗಳು ಪೂರ್ವ ಅಫ್ಘಾನಿಸ್ತಾನದಲ್ಲಿ, ವಿಶೇಷವಾಗಿ ನಂಗರ್ ಹಾರ್ ಪ್ರಾಂತ್ಯದಲ್ಲಿ ಸಕ್ರಿಯವಾಗಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಆದರೆ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ಹೇಳಿಕೆಯನ್ನು ಖಂಡಿಸಿದ್ದು, ಹೇಳಿಕೆಯು ಗಂಭೀರ ಅಪರಾಧ ಎಂದು ಟೀಕಿಸಿದ್ದಾರೆ. ದಾಳಿಯಲ್ಲಿ ಗಾಯಗೊಂಡ 23 ಜನರನ್ನು ಪ್ರಾಂತೀಯ ರಾಜಧಾನಿ ಜಲಾಲಾಬಾದ್ಗೆ ಸಾಗಿಸಲಾಗಿದ್ದು, ಉಳಿದವರಿಗೆ ಹಸ್ಕಮೆನಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಂಗರ್ಹಾರ್ ಪ್ರಾಂತ್ಯದ ಸಾರ್ವಜನಿಕ ಆರೋಗ್ಯ ಇಲಾಖೆಯ ವಕ್ತಾರ ಜಹೀರ್ ಆದಿಲ್ ತಿಳಿಸಿದ್ದಾರೆ. ದೇಶದ ಹೆಚ್ಚುತ್ತಿರುವ ಭೀಕರ ಯುದ್ಧದಲ್ಲಿ ಅಫ್ಘನ್ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದ ಒಂದು ದಿನದಲ್ಲೇ ಹಿಂಸಾಚಾರ ನಡೆದಿದೆ.