61299 ಸ್ವಯಂ ಪ್ರೇರಿತ ದೂರು ದಾಖಲು : ಗೃಹ ಸಚಿವ ಡಾ.ಜಿ.ಪರಮೇಶ್ವರ್

61299 ಸ್ವಯಂ ಪ್ರೇರಿತ ದೂರು ದಾಖಲು : ಗೃಹ ಸಚಿವ ಡಾ.ಜಿ.ಪರಮೇಶ್ವರ್ 61299 Self-motivated complaint filed: Home Minister Dr. G. Parameshwar

ಬೆಳಗಾವಿ ಸುವರ್ಣವಿಧಾನಸೌಧ,ಡಿ.18: ರಾಜ್ಯದಲ್ಲಿ ಕಳೆದ 2.5 ವರ್ಷದಲ್ಲಿ  ಪೊಲೀಸರು 61299 ಸ್ವಯಂ ಪ್ರೇರಿತ ದೂರುಗಳನ್ನು ದಾಖಲು  ಮಾಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. 

ಅವರು ವಿಧಾನ ಪರಿಷತ್ ನಲ್ಲಿ ಶಾಸಕ ಸಿ. ಟಿ. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ದಾಖಲು ಮಾಡಿರುವ ಸ್ವಯಂ ಪ್ರೇರಿತ ದೂರುಗಳಲ್ಲಿ  57646 ದೂರುಗಳಿಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಯಾವುದೇ ದೂರಗಳನ್ನು ಹಿಂಪಡೆದಿಲ್ಲ ಎಂದು ತಿಳಿಸಿದರು. 

ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸುವಾಗ,  ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಂದರ್ಭ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿದ ಸಂದರ್ಭ,  ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲಿ,  ವಾರಸುದಾರರು ಯಾರೂ ಇಲ್ಲದೇ ಇರುವ ಪ್ರಕರಣಗಳಲ್ಲಿ,  ದ್ವೇಷಭಾಷಣ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವ ಸಂದರ್ಭಗಳಲ್ಲಿ, ಕೆಲವು ಪ್ರಕರಣಗಳಲ್ಲಿ ಸಾರ್ವಜನಿಕರು ದೂರು ನೀಡಲು ಬಾರದೇ ಇದ್ದ ಸಂದರ್ಭಗಳಲ್ಲಿ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ  ಕೈಗೊಳ್ಳಲಾಗುವುದು ಎಂದರು. 

ಸಾರ್ವಜನಿಕರ ಪ್ರಾಣ ಮತ್ತು ಮಾನ ಕಾಪಾಡುವ ಸಂದರ್ಭಗಳಲ್ಲಿ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಲಾಗುತ್ತಿದೆ. ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿಯಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತಹ ಸಂಜ್ಞೆಯ ಅಪರಾಧ, ಕೃತ್ಯದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದೂರುಗಳನ್ನು ದಾಖಲಿಸಲಾಗುತ್ತಿದೆ  ಎಂದರು. 

ಕಳೆದ ಮೂರು ವರ್ಷದಿಂದ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಒಟ್ಟು 12 ಮಂದಿಯ ಮೇಲೆ  ಪ್ರಕರಣ ದಾಖಲಿಸಿ  ಬಂಧಿಸಲಾಗಿದೆ ಎಂದು ತಿಳಿಸಿದರು.