ಮನಿಲಾ, ಅ.17: ದಕ್ಷಿಣ ಫಿಲಿಪ್ಪೀನ್ಸ್ನ ಉತ್ತರ ಕೊಟಾಬಾಟೊ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ 6.3 ತೀವ್ರತೆಯ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಭೂಕಂಪನದಿಂದ ದತು ಪಾಗ್ಲಾಸ್ ಪಟ್ಟಣದಲ್ಲಿ ಗೋಡೆಯೊಂದು ಕುಸಿದು ಏಳು ವರ್ಷದ ಮಗು ಮನೆಯೊಂದರಲ್ಲಿ ಮೃತಪಟ್ಟಿದೆ ಎಂದು ಉತ್ತರ ಕೊಟಾಬಾಟೊದ ತುಲುನಾನ್ ಪಟ್ಟಣದ ಮೇಯರ್ ರೆಯುಲ್ ಲಿಂಬುಂಗನ್ ತಿಳಿಸಿದ್ದಾರೆ. ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಮಲಾಂಗ್ ಪಟ್ಟಣದ ಉಪ ಮೇಯರ್ ಜೋಸೆಲಿಟೊ ಪಿನೋಲ್ ಅವರು ಮಾಹಿತಿ ನೀಡಿದ್ದಾರೆ. ದಾವೊ ಡೆಲ್ ಸುರ್ನ ಮ್ಯಾಗ್ಸೆಸೆ ಪಟ್ಟಣದಲ್ಲಿ, ಮನೆಯೊಂದರಲ್ಲಿ ಮಲಗಿದ್ದ ಎರಡು ವರ್ಷದ ಮಗು ಮೇಲೆ ಮನೆಯ ವಸ್ತುಗಳು ಬಿದ್ದು ಮಗು ಮೃತಪಟ್ಟಿದೆ. ಭೂಕಂಪನದಿಂದ ಉಂಟಾದ ಭೂಕುಸಿತದಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರೀಯ ವಿಪತ್ತು ಕಡಿತ ಮತ್ತು ನಿರ್ವಹಣಾ ಮಂಡಳಿಯು, ಭೂಕಂಪನದಿಂದ ಉಂಟಾದ ಹಾನಿಗಳ ಅಧಿಕೃತ ಸಂಖ್ಯೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಮಕಿಲಾಲಾ ಪಟ್ಟಣದಲ್ಲಿ ಕನಿಷ್ಠ 17 ಜನರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ವಿಪತ್ತು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕೊಟಾಬಾಟೊದ ತುಲುನಾನ್ ಪಟ್ಟಣದಲ್ಲಿ ಮತ್ತು ದಾವೊ ಡೆಲ್ ಸುರ್ನ ಮ್ಯಾಗ್ಸೆಸೆ ಮತ್ತು ಡಿಗೊಸ್ನಲ್ಲಿ ಕನಿಷ್ಠ 60 ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಬುಧವಾರ ಸ್ಥಳೀಯ ಕಾಲಮಾನ 1937 ಗಂಟೆಗೆ ಒಳನಾಡಿನ ಭೂಕಂಪನವು ಉತ್ತರ ಕೊಟಾಬಾಟೊ ಪ್ರಾಂತ್ಯದ ಮಕಿಲಾಲಾದ ನೈರುತ್ಯಕ್ಕೆ 23 ಕಿ.ಮೀ. ದೂರದಲ್ಲಿ, 2 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಫಿಲಿಪ್ಪೀನ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ ತಿಳಿಸಿದೆ. ಹಲವಾರು ಮನೆಗಳು ಮತ್ತು ಕಟ್ಟಡಗಳು ಹಾನಿಗೀಡಾಗಿವೆ. ಭೂಕಂಪನದಿಂದ ಪಟ್ಟಣಗಳಲ್ಲಿ ಅನೇಕ ಜನರು ತಾತ್ಕಾಲಿಕ ಶಿಬಿರಗಳಲ್ಲಿ ಅಥವಾ ರಾತ್ರಿಯಿಡೀ ತೆರೆದ ಗಾಳಿಯಲ್ಲಿ ನೆಲೆಸಿದ್ದಾರೆ ಎಂದು ಸಕರ್ಾರಿ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ದಾವೊ ನಗರ ಮತ್ತು ಕಿಡಪವಾನ್ ಸಿಟಿಯಲ್ಲಿ ಭಯಭೀತರಾದ ನಿವಾಸಿಗಳು ಮತ್ತು ಕಚೇರಿ ಕೆಲಸಗಾರರು ಕಟ್ಟಡದಿಂದ ಹೊರಬಂದಿದ್ದಾರೆ. ಕಿಡಪವಾನ್ ನಗರದ ಆಸ್ಪತ್ರೆಯಲ್ಲಿದ್ದ ಕೆಲವು ರೋಗಿಗಳನ್ನು ಸಹ ಹಾನಿಗೊಳಗಾದ ಆಸ್ಪತ್ರೆ ಕಟ್ಟಡದಿಂದ ಸ್ಥಳಾಂತರಿಸಲಾಗಿದೆ. ಭೂಕಂಪನ ಬಳಿಕ 200 ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ ಎಂದು ಸಂಸ್ಥೆ ಹೇಳಿದೆ. ಫಿಲಿಪ್ಪೀನ್ಸ್ನಲ್ಲಿ ಆಗಾಗ ಭೂಮಿ ಕಂಪಿಸುವುದು ಸಾಮಾನ್ಯವಾಗಿದ್ದು, ಈ ಪ್ರದೇಶವನ್ನು ಭೂಕಂಪನ ಸಂಭವಿಸುವ ಪ್ರದೇಶ ಎಂದು ಗುರುತಿಸಲಾಗಿದೆ.