ಶೀಘ್ರ ರಾಜ್ಯದ 58ಸಾವಿರ ಶಿಕ್ಷಕರು ಪದವೀಧರ ಶಿಕ್ಷಕರಾಗಿ ಬಡ್ತಿ: ನುಗ್ಗಲಿ

58,000 teachers in the state will soon be promoted to graduate teachers: Nuggali

ಹಾರೂಗೇರಿ 23: ರಾಜ್ಯದ ಪದವೀಧರ ಶಿಕ್ಷಕರ ಸಮಸ್ಯೆ, ಮುಖ್ಯಗುರುಗಳು ಮತ್ತು ಹಿರಿಯ ಮುಖ್ಯಗುರುಗಳ ಬಡ್ತಿ, ಬಿಇಡಿ ಮುಗಿದ ಶಿಕ್ಷಕರನ್ನು ಪ್ರೌಢಶಾಲೆಗೆ ಬಡ್ತಿ ಜೊತೆಗೆ ಎನ್‌ಪಿಎಸ್‌ನಿಂದ ಒಪಿಎಸ್ ಜಾರಿ ಮಾಡುವ ಕೆಲಸವನ್ನು ರಾಜ್ಯದ ಶಿಕ್ಷಕರ ಸಂಘಟನೆ ಖಂಡಿತ ಮಾಡಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು. 

ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ರವಿವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಯಬಾಗ ತಾಲೂಕು ಘಟಕ, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವುಗಳ ಸಹಯೋಗದೊಂದಿಗೆ ಸಂಘದ ದಶಮಾನೋತ್ಸವದ ನಿಮಿತ್ತ ಶೈಕ್ಷಣಿಕ ಕಾರ್ಯಾಗಾರ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಅಕ್ಷರದವ್ವ, ಅಕ್ಷರಸಿರಿ ಮತ್ತು ಶಿಕ್ಷಣ ಸಾರಥಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮುಂದಿನ ಕೆಲವೇ ತಿಂಗಳುಗಳಲ್ಲಿ ರಾಜ್ಯದ 58ಸಾವಿರ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಸುಗ್ರೀವಾಜ್ಞೆಯನ್ನು ಹೊರಬೀಳುವ ಕಾಲ ಸನ್ನಿಹಿತವಾಗಿದೆ. ಜಿಪಿಟಿ ಶಿಕ್ಷಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿಲ್ಲ. ಹಿಂಬಡ್ತಿ ಶಿಕ್ಷಕರಿಗೆ ನ್ಯಾಯ ಒದಗಿಸಲಾಗುತ್ತಿದೆ. ಸಾಧ್ಯವಾದಷ್ಟು ಬೇಗ ಮುಖ್ಯೋಪಾಧ್ಯಾಯರು ಮತ್ತು ಹಿರಿಯ ಮುಖ್ಯೋಪಾಧ್ಯಾಯರ ಬಡ್ತಿಯನ್ನು ಪ್ರಾರಂಭ ಮಾಡುತ್ತೇವೆ. ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಸಂಘಟನೆ ಮಾಡುತ್ತದೆ. ರಾಜ್ಯದ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕು.  

ಈಗಾಗಲೇ 13500 ಶಿಕ್ಷಕರನ್ನು ಎನ್‌ಪಿಎಸ್ ನಿಂದ ಓಪಿಎಸ್‌ಗೆ ಆದೇಶ ಮಾಡಲಾಗಿದೆ.  ಒಂದು ತಿಂಗಳ ಒಳಗಾಗಿ ರಾಜ್ಯದ 5ಸಾವಿರ ಶಿಕ್ಷಕರನ್ನು ಎನ್‌ಪಿಎಸ್ ನಿಂದ ಒಪಿಎಸ್ ಜಾರಿ ಆದೇಶ ಮಾಡಲಾಗುತ್ತದೆ. ಇನ್ನುಳಿದ 2.5 ಲಕ್ಷ ಜನರನ್ನೂ ಕೂಡ ಎನ್‌ಪಿಎಸ್‌ನಿಂದ ಓಪಿಎಸ್‌ಗೆ ಒಳಪಡಿಸುವುದಾಗಿ ಸರ್ಕಾರ ಮಾತು ಕೊಟ್ಟಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ ಅವರು ಕೊಟ್ಟ ಮಾತು ತಪ್ಪುವುದಿಲ್ಲ ಎಂದು ಚಂದ್ರಶೇಖರ ನುಗ್ಗಲಿ ಹೇಳಿದರು.  

ಹುಕ್ಕೇರಿ ಬಿಇಒ ಪ್ರಭಾವತಿ ಪಾಟೀಲ ಮಾತನಾಡಿ ಮಹಿಳಾ ಸಬಲೀಕರಣ ಪ್ರಸ್ತುತ ಸಂದರ್ಭದ ಅಗತ್ಯವಿದ್ದು, ಮಹಿಳೆಯರು ಪುರುಷರ ಸಮಾನ ಎಲ್ಲ ಕ್ಷೇತ್ರಗಳಲ್ಲಿಯೂ ಸಮಪಾಲು ಪಡೆದುಕೊಂಡಾಗ ಪ್ರಜಾಪ್ರಭುತ್ವದ ಆಶಯ ಸಫಲವಾಗುತ್ತದೆ. ಮಹಿಳೆಯರನ್ನು ಗೌರವಿಸುವುದು, ಮಹಿಳೆಯರಿಗೆ ರಕ್ಷಣೆ ಮತ್ತು ಭದ್ರತೆ ನೀಡುವುದು ಸಮಾಜದ ನೈತಿಕ ಶಿಕ್ಷಣವಾಗಬೇಕೆಂದು ಹೇಳಿದರು.  

ಸಂಘದ ಚಿಕ್ಕೋಡಿ ಜಿಲ್ಲಾ ಘಟಕ ಅಧ್ಯಕ್ಷ ಎಸ್‌.ಎಂ.ಲೋಕನ್ನವರ ಮಾತನಾಡಿ ಪ್ರತಿಯೊಂದು ಮಗುವಿನ ಹೃದಯದಲ್ಲಿ ಶಿಕ್ಷಕರಿರಬೇಕು. ಇದಕ್ಕಿಂತ ದೊಡ್ಡ ಪ್ರಶಸ್ತಿ ಮತ್ತೊಂದಿಲ್ಲ ಎಂದ ಅವರು ರಾಯಬಾಗ ತಾಲೂಕು ಸಂಘಟನೆ ಸಕ್ರೀಯವಾಗಿ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. 

ಮುಖ್ಯಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್ ಮಾತನಾಡಿದರು. ಸಮಾರಂಭದ ಸಾನಿಧ್ಯ ವಹಿಸಿದ್ದ ಇಟನಾಳದ ಪೂಜ್ಯಶ್ರೀ ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಸುಮಾರು 200 ಶಿಕ್ಷಕ-ಶಿಕ್ಷಕಿಯರಿಗೆ ಅಕ್ಷರದವ್ವ, ಅಕ್ಷರಸಿರಿ ಮತ್ತು ಶಿಕ್ಷಣ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು.  

ರಾಯಬಾಗ ತಾಲೂಕು ಅಧ್ಯಕ್ಷ ವಿಷ್ಣು ಅರಗೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಎಸ್‌.ಬುಡ್ಡಗೋಳ, ಗೌರವಾಧ್ಯಕ್ಷ ಜಿ.ಎಂ.ಹಿರೇಮಠ, ಸಮನ್ವಯಾಧಿಕಾರಿ ಬಿ.ಎನ್‌.ಕಾಂಬಳೆ, ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮೇಶ ಪೋಳ, ಸುಭಾಷ ಬಡಿಗೇರ, ವೀರಭದ್ರ ಬಡಿಗೇರ, ಮಹಾದೇವ ಐಹೊಳೆ, ಸದಾಶಿವ ಶಿಂಗೆ, ಪರ​‍್ಪ ಮಾದರ, ಬಸನಗೌಡ ಪಾಟೀಲ, ಶ್ರೀಧರ ಚೌಗಲಾ, ಟಿ.ಜಿ.ಮುಜಾವರ, ಕಲಾವತಿ ದಳವಾಯಿ, ಬಿ.ಎಲ್‌.ಘಂಟಿ, ಶ್ರೀಕಾಂತ ರಾಯಮಾನೆ, ಪ್ರತಾಪ ಜೋಡಟ್ಟಿ ಹಾಗೂ ಮೊದಲಾದ ಗಣ್ಯರು ಉಪಸ್ಥಿತರಿದ್ದರು.    

ಅಶೋಕ ಕೌಲಗುಡ್ಡ ಸ್ವಾಗತಿಸಿದರು. ಬಿ.ಎಲ್‌.ಶಾರದಾ ಕಾರ್ಯಕ್ರಮ ನಿರೂಪಿಸಿದರು.