ಸಿಯೋಲ್, ಫೆ 28 : ದಕ್ಷಿಣ ಕೊರಿಯಾದಲ್ಲಿ ಕೊರೊನವೈರಸ್ ನ 571 ಹೊಸ ಪ್ರಕರಣಗಳು ಶುಕ್ರವಾರ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,337 ಕ್ಕೆ ಏರಿದೆ.
ಶುಕ್ರವಾರ ಸಂಜೆ 4 ಗಂಟೆಯ ವೇಳೆಗೆ ಸೋಂಕಿತ ರೋಗಿಗಳ ಸಂಖ್ಯೆ 2,337ಕ್ಕೆ ಏರಿದ್ದು, ಸಾವಿನ ಸಂಖ್ಯೆ 13ರಲ್ಲಿ ಯಥಾಸ್ಥಿತಿಯಲ್ಲಿದೆ.
ಕೊರಿಯಾ ರೋಗ ನಿಯಂತ್ರಣಾ ಸಂಸ್ಥೆ ದಿನಕ್ಕೆ ಎರಡು ಬಾರಿ ಬೆಳಿಗ್ಗೆ 10 ಗಂಟೆಗೆ ಮತ್ತು ಸಂಜೆ 5 ಗಂಟೆಗೆ ಪ್ರಕರಣಗಳ ಕುರಿತ ಮಾಹಿತಿಯನ್ನು ನವೀಕರಿಸುತ್ತದೆ.
ಹೊಸ ರೋಗಿಗಳ ಪೈಕಿ 447 ಜನರು ರಾಜಧಾನಿ ಸಿಯೋಲ್‌ನ ಆಗ್ನೇಯಕ್ಕೆ 300 ಕಿ.ಮೀ ದೂರದಲ್ಲಿರುವ ಡೇಗುನಲ್ಲಿ ವಾಸಿಸುತ್ತಿದ್ದಾರೆ. ಉಳಿದಂತೆ 64 ಡೇಗು ಸುತ್ತಮುತ್ತಲಿನ ಉತ್ತರ ಜಿಯೊಂಗ್‌ಸಾಂಗ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ.
ಡೇಗು ಮತ್ತು ಉತ್ತರ ಜಿಯೊಂಗ್‌ಸಾಂಗ್ ಪ್ರಾಂತ್ಯದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ ಕ್ರಮವಾಗಿ 1,579 ಮತ್ತು 409 ಕ್ಕೆ ಏರಿದೆ.
ಇತ್ತೀಚಿನ ದಿನಗಳಲ್ಲಿ ವೈರಸ್ ಸೋಂಕು ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ. ಫೆ 19 ರಿಂದ 27ರ ವರೆಗೆ 1,735 ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ತನ್ನ ನಾಲ್ಕು ಹಂತದ ವೈರಸ್ ಎಚ್ಚರಿಕೆಯನ್ನು ಸರ್ಕಾರ ಭಾನುವಾರ ಅಪಾಯದ ಕೆಂಪು ಮಟ್ಟಕ್ಕೆ ಏರಿಸಿದೆ.
2.4 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಡೇಗು ನಗರ ಸೋಂಕು ಹರಡುವಿಕೆಗೆ ಕೇಂದ್ರಬಿಂದುವಾಗಿದೆ.
ಒಟ್ಟು 117 ಪ್ರಕರಣಗಳು ಡೇಗು ದಕ್ಷಿಣಕ್ಕಿರುವ ಚೆಯೊಂಗ್ಡೊ ಕೌಂಟಿಯ ಡೇನಮ್ ಆಸ್ಪತ್ರೆಯಲ್ಲಿ ಪತ್ತೆ ಮಾಡಲಾಗಿವೆ. ಆಸ್ಪತ್ರೆಯ ಮನೋವೈದ್ಯಕೀಯ ವಾರ್ಡ್‌ನ ಬಹುತೇಕ ಎಲ್ಲಾ ರೋಗಿಗಳಿಗೆ ವೈರಸ್ ಸೋಂಕು ಇರುವುದು ದೃಢಪಟ್ಟಿರುವುದರಿಂದ ಸುಮಾರು 650 ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದೆ.