ಚೀನಾದಿಂದ ಮುಂದಿನ ಎರಡು ವರ್ಷಗಳಲ್ಲಿ ನೇಪಾಳಕ್ಕೆ 56 ಶತಕೋಟಿ ನೆರವು

ಕಠ್ಮಂಡು, ಅಕ್ಟೋಬರ್ 13:    ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅನೌಪಚಾರಿಕ ಶೃಂಗಸಭೆಯ ನಿರ್ಣಾಯಕ ಚರ್ಚೆ ನಡೆಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ನೇಪಾಳ ಮತ್ತು ಚೀನಾ ನಡುವಿನ "ಪ್ರೀತಿ" ಮತ್ತು ಸೌಹಾರ್ದಯುತ ಸಂಬಂಧಗಳಿಂದ ಪ್ರಭಾವಿತವಾಗಿರುವುದಾಗಿ ಹೇಳಿದ್ದಾರೆ. 

ಮುಂದಿನ ಎರಡು ವರ್ಷಗಳಲ್ಲಿ ಚೀನಾ, ನೇಪಾಳಕ್ಕೆ 56 ಬಿಲಿಯನ್ ರೂ. ನೆರವು ನೀಡಲಿದೆ ಎಂದು ನೇಪಾಳಿ ಅಧ್ಯಕ್ಷೆ ಭಂಡಾರಿ ಅವರೊಂದಿಗಿನ ಸಭೆಯಲ್ಲಿ  ಕ್ಸಿ ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

"ನೇಪಾಳ, ನನ್ನನ್ನು ಸೌಹಾರ್ದಯುತವಾಗಿ ಸ್ವಾಗತಿಸಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡ ರೀತಿಗೆ ನಾನು ಪ್ರಭಾವಿತನಾಗಿದ್ದೇನೆ" ಎಂದು ಚೀನಾ ಅಧ್ಯಕ್ಷರು ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರಿಗೆ ತಿಳಿಸಿದರು. 

ಚೀನಾ ಮತ್ತು ನೇಪಾಳ ನಡುವೆ 'ಕೇವಲ ಸ್ನೇಹ ಮತ್ತು ಸಹಕಾರವಿದೆ' ಎಂದು ಅವರು ಒಪ್ಪಿಕೊಂಡರು ಎಂದು ಭಂಡಾರಿ ತಿಳಿಸಿರುವುದಾಗಿ ಚೀನಾದ ಮಾಧ್ಯಮಗಳು ವರದಿ ಮಾಡಿವೆ. 

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಎರಡನೇ ಅನೌಪಚಾರಿಕ ಶೃಂಗಸಭೆ ನಡೆಸಿದ ನಂತರ ಕ್ಸಿ ಶನಿವಾರ ಇಲ್ಲಿಗೆ ಆಗಮಿಸಿದರು. 

ಕ್ಸಿ, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ.