ಉಭಯ ಗುರುಗಳ ಕನಸನ್ನು ಕಲ್ಲಯ್ಯಜ್ಜನವರು ಸಾಕಾರಗೊಳಿಸಿದ್ದಾರೆ : ನಂದಿವೇರಿ ಶ್ರೀಗಳು

ಉಭಯ ಗುರುಗಳ ಕನಸನ್ನು ಕಲ್ಲಯ್ಯಜ್ಜನವರು ಸಾಕಾರಗೊಳಿಸಿದ್ದಾರೆ : ನಂದಿವೇರಿ ಶ್ರೀಗಳು  55th Birth Anniversary of Pujyashri Kallayyajjana

ಗದಗ  06 :  ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ ಹಾಗೂ ಲಿಂ. ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ಮಾರ್ಗದರ್ಶದಲ್ಲಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ವಿರೇಶ್ವರ ಪುಣ್ಯಾಶ್ರಮವನ್ನು ಮುನ್ನೆಡಿಸಿಕೊಂಡು ಹೋಗುತ್ತಿರುವದರಿಂದ ಉಭಯ ಗುರುಗಳ ಕನಸನ್ನು ಸಾಕಾರಗೊಳಿಸಿದ್ದಾರೆ ಎಂದು ಕಪೋತಗಿರಿ ನಂದಿವೇರಿ ಶ್ರೀಮಠದ ಪೂಜ್ಯಶ್ರೀ ಶಿವಕುಮಾರ ಶ್ರೀಗಳು ಹೇಳಿದರು.  

ಅವರು ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಪೂಜ್ಯಶ್ರೀ ಕಲ್ಲಯ್ಯಜ್ಜನವರ 55 ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತುಲಾಬಾರ ಸೇವೆಗಳನ್ನು ನೆರವೇರಿಸಿ ಮಾತನಾಡಿ, ಪೂಜ್ಯಶ್ರೀ ಕಲ್ಲಯ್ಯಜ್ಜನವರ ನೇತೃತ್ವದಲ್ಲಿ ಪುಣ್ಯಾಶ್ರಮವು  ಉತ್ತರೋತ್ತರವಾಗಿ ಅಭಿವೃದ್ದಿಗೊಳ್ಳಲಿ, ಹಾನಗಲ್ ಶ್ರೀಗುರು ಕುಮಾರೇಶ್ವರರ, ಪಂ. ಪಂಚಾಕ್ಷರ ಗವಾಯಿಗಳವರ ಹಾಗೂ ಪಂ. ಪುಟ್ಟರಾಜ ಗವಾಯಿಗಳವರ ಶ್ರೀರಕ್ಷೆ ಕಲ್ಲಯ್ಯಜ್ಜನವರ ಮೇಲೆ ಸದಾ ಇರಲಿದೆ ಎಂದು ಶುಭಹಾರೈಸಿದರು.  

ಲಿಂಗಸೂರಿನ ಮಾಣಿಕೇಶ್ವರಿ ಅಶ್ರಮದ   ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಪೂಜ್ಯಶ್ರೀ ಕಲ್ಲಯ್ಯಜ್ಜನವರ ತುಲಾಬಾರ ಸೇವೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಂದಿಶ್ವರಿ ಅಮ್ಮನವರಿಗೆ “ನಡೆದಾಡುವ ನಕ್ಷತ್ರ” ಎಂಬ ಬಿರುದು ನೀಡಿ ಶ್ರೀಮಠದಿಂದ ಗೌರವಿಸಲಾಯಿತು.  

ವೇದಿಕೆ ಮೇಲೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ-ಡಾವಣಗೆರೆ ಸೋಲ್‌ಟ್ರಸ್ಟ್‌ನ ಸದಸ್ಯರಾದ ಪಿ.ಎಫ್‌. ಕಟ್ಟಿಮನಿ, ಪಿ.ಸಿ.ಹಿರೇಮಠ, ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳ, ಜೋಹರಾ ಕೌತಾಳ, ಜೇವರ್ಗಿಯ ನಾಡಗೌಡ ಅಪ್ಪಸಾಬ ಪಾಟೀಲ, ವಿರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕರಾದ ಹೇಮರಾಜಶಾಸ್ತ್ರಿ ಹಿರೇಮಠ ಹೆಡಿಗ್ಗೊಂಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  

ಇದಕ್ಕೂ ಮುನ್ನ  ಪೂಜ್ಯಶ್ರೀ ಕಲ್ಲಯ್ಯಜ್ಜನವರನ್ನು ಪುಣ್ಯಾಶ್ರಮದ ಶಿಷ್ಯವೃಂದವು ಹೂವಿನ ದಾರಿಯಲ್ಲಿ ಹೂವಿನ ಸುರಿಮಳೆಗೈಯುತ್ತ ಕೈಹಿಡಿದು ಕರೆದುಕೊಂಡ ಬಂದರು. ಪೀರಸಾಬ್ ದಂಪತಿಗಳು ಸೇಬುವಿನ ಬೃಹತ್ ಹಾರದೊಂದಿಗೆ ಸನ್ಮಾನಿಸಿ  ಕೇಕನ್ನು ಕತ್ತರಿಸುವ ಮೂಲಕ ಕಲ್ಲಯ್ಯಜ್ಜನವರ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.