ಮನಿಟ್ಯಾಪ್ ಸಂಸ್ಥೆಯಿಂದ 500 ಕೋಟಿ ರೂ. ಬಂಡವಾಳ ಕ್ರೋಡೀಕರಣ

ಬೆಂಗಳೂರು, ಜ.30 ,ಆ್ಯಪ್ ಮೂಲಕ ಗ್ರಾಹಕರಿಗೆ ಸಾಲ ಒದಗಿಸುವ ಮನಿ ಟ್ಯಾಪ್ ಸಂಸ್ಥೆಯು 500 ಕೋಟಿ ರೂ ಬಂಡವಾಳ ಕ್ರೋಡೀಕರಿಸಿದೆ. ಷೇರು ಹಾಗು ಸಾಲದ ರೂಪದಲ್ಲಿ ಈ ಬಂಡವಾಳವನ್ನು ಕ್ರೋಡೀಕರಿಸಿದೆ. ಪರಿಣಾಮ ಸಂಸ್ಥೆಯು ಮುಂದಿನ 12-18 ತಿಂಗಳ ಅವಧಿಯಲ್ಲಿ ಸುಮಾರು 5,000 ಕೋಟಿ ರೂ ಸಾಲದ ಮೊತ್ತವನ್ನು ಸೃಷ್ಟಿಸುವ ಗುರಿ ಹೊಂದಿದೆ. ಅಕ್ವಿಲೌನ್ ಟೆಕ್ನಾಲಜಿ ಗ್ರೋತ್, ಆರ್ಟಿಪಿ ಗ್ಲೋಬಲ್ ಅಂಡ್ ಸೆಕ್ವೆಯ್ಯಾ ಇಂಡಿಯಾ ಹಾಗು ಕೊರಿಯಾ ಮತ್ತು ಜಪಾನ್ ಮೂಲದ ಹೂಡಿಕೆದಾರರು ಸೇರಿದಂತೆ ಗ್ಲೋಬಲ್ ಫಂಡ್ ಮುಂದಾಳತ್ವದಲ್ಲಿ ಈ ಇಕ್ವಿಟಿ ಸೀರಿಸ್ ಫಂಡಿಂಗ್ ಪ್ರಕ್ರಿಯೆ ನೆರವೇರಿತು.ಈ ಹಿಂದೆ ಸಂಸ್ಥೆಯು 12.3 ದಶಲಕ್ಷ ಡಾಲರ್ ಬಂಡವಾಳವನ್ನು ಕ್ರೋಡೀಕರಿಸಿತ್ತು.

ಮನಿಟ್ಯಾಪ್ ಸಂಸ್ಥೆಯು ಭಾರತದ ಮೊದಲ ಆ್ಯಪ್ ಆಧಾರಿತ ಸಾಲ ಒದಗಿಸುವ ವೇದಿಕೆ. ಬೆರಳ ತುದಿಯಲ್ಲಿ ಗ್ರಾಹಕರಿಗೆ ಸಾಲವನ್ನು ಒದಗಿಸುತ್ತದೆ. ಒಂದು ವರ್ಷಕ್ಕೆ ಸುಮಾರು 2500 ಕೊಟಿ ರೂ. ಸಾಲ ವಿತರಿಸಿದೆ ಮತ್ತು ಆರ್‌ಬಿಐನಿಂದ ಎನ್‌ಬಿ ಎಫ್‌ಸಿ ಪರವಾನಗಿ ಕೂಡ ಪಡೆದುಕೊಂಡಿದೆ. "ಫಿನ್ಟೆಕ್ ಕ್ಷೇತ್ರದಲ್ಲಿ ಸಂಸ್ಥೆಯ ಸ್ಥಾನ ಮತ್ತು ಗ್ರಾಹಕರ ಹಾಗು ಹೂಡಿಕೆದಾರರ ವಿಶ್ವಾಸಕ್ಕೆ ಈ ಬಂಡವಾಳ ಕ್ರೋಡೀಕರಣ ಪ್ರಕ್ರಿಯೆ ಸಾಕ್ಷಿ. ಕೈಗೆಟುಕುವ ದರದಲ್ಲಿ ಮದ್ಯಮ ವರ್ಗಕ್ಕೆ ಸಾಲ ಒದಗಿಸುವುದು ನಮ್ಮ ಗುರಿ. ಈ ಬಂಡವಾಳವನ್ನು ಸಾಲ ನೀಡುವುದಕ್ಕೆ ಮತ್ತು ಸಂಸ್ಥೆಯನ್ನು ಬೆಳೆಸುವ ನಿಟ್ಟಿನಲ್ಲಿ ಬಳಸಲಾಗುವುದು" ಎಂದು ಮನಿಟ್ಯಾಪ್ ಸಂಸ್ಥೆಯ ಸಹ ಸಂಸ್ಥಾಪಕ ಅನುಜ್ ಕಕ್ಕೆರ್ ತಿಳಿಸಿದ್ದಾರೆ.