ಎನ್.ಎಸ್.ಎಸ್.ನಿಂದ ಸ್ವಚ್ಛ ಭಾರತ ಅಭಿಯಾನ ಧಾರವಾಡದ ನೆಹರು ನಗರದಲ್ಲಿ 50 ಗಂಟೆಗಳ ತ್ಯಾಜ್ಯ ನಿರ್ವಹಣೆ

ಧಾರವಾಡ, 03 :  ನಗರದ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಕಲಾ ಹಾಗೂ ಡಾ. ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ (ಎನ್.ಎಸ್.ಎಸ್.) ಘಟಕದ ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನೆಹರುನಗರ ಕೊಳೆಗೇರಿ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮ ಉದ್ಘಾಟಿಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ-1ರ ಸಹಾಯಕ ಆಯುಕ್ತ ಮಲ್ಲಿಕಾರ್ಜುನ ಸಬರದ ಮಾತನಾಡಿ, ಸ್ವಚ್ಛತೆಯ ಕೊರತೆಯಿಂದ ಪ್ರತಿನಿತ್ಯ ವಿವಿಧ ರೋಗಗಳಿಗೆ ತುತ್ತಾಗಿ ಸಾವಿರಾರು ಜನ ಸಾಯುತ್ತಿದ್ದಾರೆ. ನಮ್ಮ ಪರಿಸರ, ನಾಡು, ಕಾಡನ್ನು ಕಾಪಾಡದೇ ಹೋದರೆ ಮುಂದಿನ ಪೀಳಿಗೆಯವರು ಹೆಗಲ ಮೇಲೆ ಆಕ್ಸೀಜನ್ ಡಬ್ಬಿಯನ್ನಿಟ್ಟುಕೊಂಡು ಜೀವನ ನಡೆಸಬೇಕಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕೀಯರು ಗಿಡನೆಟ್ಟು ನಾಡನ್ನು ಬೆಳೆಸಿ ಪರಿಸರವನ್ನು ಸ್ವಚ್ಛವಿಡಲು ಧೃಢಸಂಕಲ್ಪ ಮಾಡುವುದರೊಂದಿಗೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಯೋಜನಾಧಿಕಾರಿ ಉಲ್ಲಾಸ ಮೇಸ್ತ್ರಿ 'ಜ್ಞಾನ ವಿಕಾಸದ' ಕಾರ್ಯಕ್ರಮಗಳ ಅಡಿಯಲ್ಲಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ನೆಹರುನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಸವಿತಾ ನಾಡಗೌಡ  ಮಾತನಾಡಿ, ಮನಸ್ಸಿದ್ದರೆ ಮಾರ್ಗ ಎಂಬಂತೆ ಯುವಜನತೆಯು ನಿರಂತರ ಚಿಂತನೆ, ಪ್ರಯತ್ನ ಮಾಡುವುದರ ಮೂಲಕ ಪರಿಸರವನ್ನು ಸ್ವಚ್ಛವಾಗಿಡಲು ಸಾಧ್ಯ. ಈ ಪ್ರಯತ್ನದಲ್ಲಿ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಸ್ವಚ್ಛಭಾರತದ ಕನಸು ನನಸಾಗಲಿದೆ ಎಂದು ತಿಳಿಸಿದರು. 

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಸದಸ್ಯ ಬಲರಾಮ ಕುಸುಗಲ್, ಪಾಲಿಕೆಯ ವಲಯ ಕಚೇರಿ-1 ರ ನಿರೀಕ್ಷಕಿ ಪದ್ಮಾ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಪುಷ್ಪಾ ಅಬ್ಬಿಗೇರಿ ಮಾತನಾಡಿದರು. ಎನ್.ಎಸ್.ಎಸ್. ವತಿಯಿಂದ 50 ಘಂಟೆಗಳ ಈ ಅಭಿಯಾನದಲ್ಲಿ ರಸ್ತೆ ಸ್ವಚ್ಛತೆ, ನೈರ್ಮಲ್ಯದ ಕುರಿತು ಜಾಗೃತಿ ಬೀದಿನಾಟಕ ಹಾಗೂ ಹಾಡುಗಳಮೂಲಕ ತಿಳುವಳಿಕೆ,  ಬಯಲು ಶೌಚದ ದುಷ್ಪರಿಣಾಮ, ಘನ ಮತ್ತು ದ್ರವ ತ್ಯಾಜ್ಯದ ನಿರ್ವಹಣೆಯ ಬಗ್ಗೆ ಜಾಗೃತಿ ಮುಂತಾದ ಚಟುವಟಿಕೆಗಳು ನಡೆಯಲಿವೆ ಎಂದು ತಿಳಿಸಲಾಯಿತು. 

ಪ್ರಿನ್ಸಿಪಾಲ್ ಡಾ. ನಿರ್ಮಲಾ ಹಿರೇಗೌಡರ ಸ್ವಾಗತಿಸಿದರು. ಅತಿಥಿಗಳನ್ನು ಪರಿಚಯಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಗಿರಿಜಾ ಯಾಬಣ್ಣವರ ವಂದಿಸಿದರು. ಅನಿತಾ ಅಳೇಬಸಪ್ಪನವರ ನಿರೂಪಿಸಿದರು. ಹೇಮಾ ಹಂಚಿನಮನಿ, ನೆಹರುನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರು ಇದ್ದರು. ಉದ್ಘಾಟನೆಯ ನಂತರ ಎನ್.ಎಸ್.ಎಸ್. ಸ್ವಯಂಸೇವಕಿಯರು ವಿವಿಧ ಓಣಿಗಳನ್ನು ಸ್ವಚ್ಛಗೊಳಿಸಿ ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಿದರು.