ವಾಷಿಂಗ್ಟನ್, ಜ 27, ಅಮೆರಿಕದ ಐವರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದೆ ಎಂದು ಅಲ್ಲಿನ ರೋಗ ನಿಯಂತ್ರಣ ಮತ್ತು ಸುರಕ್ಷಾ ಕೇಂದ್ರ ತಿಳಿಸಿದೆ.ಈ ಐವರೂ ಚೀನಾದ ವುಹಾನ್ಗೆ ಭೇಟಿ ನೀಡಿದ್ದು ಅವರಲ್ಲಿ ಇತ್ತೀಚೆಗೆ ಹರಡುತ್ತಿರುವ ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಶ್ಚಿಮ ಅಮೆರಿಕದ ಅರಿಜೋನಾದಿಂದ ಐದನೇ ಪ್ರಕರಣ ವರದಿಯಾಗಿದ್ದು ಕ್ಯಾಲಿಫೋರ್ನಿಯಾ, ಇಲಿನಾಯ್ಸ್ ಮತ್ತು ವಾಷಿಂಗ್ಟನ್‌ನಲ್ಲಿ ಇತರ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಸಾರ್ವಜನಿಕರಿಗೆ ಸೋಂಕು ಹರಡುವ ತಕ್ಷಣದ ಅಪಾಯವಿಲ್ಲ ಎಂದು ಲಾಸ್ ಏಂಜಲೀಸ್ ಕೌಂಟಿ ಸಾರ್ವಜನಿಕ ಆರೋಗ್ಯ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿದೆ. ಅಮೆರಿಕದ ಜನರಿಗೆ ಸೋಂಕು ಹರಡುವ ಭೀತಿ ಸದ್ಯಕ್ಕಿಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ.