ಯುಜ್ನೋ-ಸಖಾಲಿನ್ಸ್ಕ್, ಜನವರಿ 28 ರಷ್ಯಾದ ದಕ್ಷಿಣ ಕುರಿಲ್ ದ್ವೀಪಗಳ ಬಳಿ ಮಂಗಳವಾರ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಷ್ಯಾದ ಅಕಾಡೆಮಿ ಆಫ್ ವಿಜ್ಞಾನ ಶಾಖೆ ತಿಳಿಸಿದೆ.ಸ್ಥಳೀಯ ಸಮಯ ಮಂಗಳವಾರ ಮಧ್ಯಾಹ್ನ 12: 36 ಕ್ಕೆ 5.2 ತೀವ್ರತೆಯ ಭೂಕಂಪನ ದಾಖಲಾಗಿದೆ ಎನ್ನಲಾಗಿದೆ.ಇದರ ಕೇಂದ್ರಬಿಂದುವು ಯುಜ್ನೋ-ಕುರಿಲ್ಸ್ಕ್‌ನ ಆಗ್ನೇಯಕ್ಕೆ 79 ಕಿಲೋಮೀಟರ್ ಆಳದಲ್ಲಿತ್ತು ಎಂದು ಯುಜ್ನೋ-ಸಖಾಲಿನ್ಸ್ಕ್ ಭೂಕಂಪನ ಕೇಂದ್ರದ ಮುಖ್ಯಸ್ಥ ಎಲೆನಾ ಸೆಮೆನೋವಾ ಹೇಳಿದ್ದಾರೆ.ಸೆಮೆನೋವಾ ಪ್ರಕಾರ, ಯುಜ್ನೋ-ಕುರಿಲ್ಸ್ಕ್ ಮತ್ತು ಮಾಲೋಕುರಿಲ್ಸ್ಕೊಯ್ ನಿವಾಸಿಗಳಿಗೆ ಕಂಪನದ ಅನುಭವವಾಗಿದೆ. ಅದೇ ಸಮಯಕ್ಕೆ , ಜಪಾನಿನ ನಗರವಾದ ನೆಮುರೊ ತೀರದಲ್ಲೂ 5.4 ತೀವ್ರತೆಯ ಭೂಕಂಪವಾಗಿದೆ ಎಂದೂ ವರದಿಯಾಗಿದೆ. ಎರಡೂ ಭೂಕಂಪಗಳಿಂದ ಸಾವು ನೋವಿನ ವರದಿಯಾಗಿಲ್ಲ, ಮೇಲಾಗಿ ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿಲ್ಲ .