46 ವಿದೇಶಿ ವಿಮಾನಯಾನ ಸಂಸ್ಥೆಗಳಿಂದ ಚೀನಾಕ್ಕೆ ವಿಮಾನ ಹಾರಾಟ ಸ್ಥಗಿತ

ಬೀಜಿಂಗ್, ಫೆ 4 : ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೋನವೈರಸ್ ಇತರ ದೇಶಗಳಿಗೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಒಟ್ಟು 46 ವಿದೇಶಿ ವಿಮಾನಯಾನ ಸಂಸ್ಥೆಗಳು ಚೀನಾಕ್ಕೆ  ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿವೆ ಎಂದು ಚೀನಾದ ನಾಗರಿಕ ವಿಮಾನಯಾನ ಆಡಳಿತ ಮಂಗಳವಾರ ತಿಳಿಸಿದೆ.

ಕೊರೊನವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಬೇಡಿಕೆ ತೀವ್ರವಾಗಿ ಕುಸಿದಿದ್ದು, ಹಲವು ದೇಶಗಳು ಚೀನಾಗೆ ತನ್ನ ನಾಗರಿಕರು ತೆರಳುವುದಕ್ಕೆ ನಿಬರ್ಂಧಗಳನ್ನು ವಿಧಿಸಿವೆ.

ಇಲ್ಲಿಯವರೆಗೆ, 46 ವಿದೇಶಿ ವಿಮಾನಯಾನ ಸಂಸ್ಥೆಗಳು ಚೀನಾಕ್ಕೆ ವಿಮಾನಗಳ ಹಾರಾಟ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ ಎಂದು ಹೇಳಿಕೆ ತಿಳಿಸಿದೆ.

ವಿದೇಶಗಳ ಸಂಸ್ಥೆಗಳು ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರ್ಗಗಳನ್ನು ಒಳಗೊಂಡಂತೆ ನಿರಂತರ ವಿಮಾನ ಸಂಚಾರವನ್ನು ಒದಗಿಸುವಂತೆ ಚೀನಾದ ವಿಮಾನಯಾನ  ಅಧಿಕಾರಿಗಳು ಸ್ಥಳೀಯ ವಿಮಾನಯಾನ ಕಂಪನಿಗಳಿಗೆ ಸೂಚಿಸಿವೆ.

ಗಡಿಯಾಚೆಗಿನ ಪ್ರಯಾಣಿಕರ ಸಾಗಣೆ ಮತ್ತು ಅಂತಾರಾಷ್ಟ್ರೀಯ ಸರಕು ಸಾಗಣೆಯ ಅಗತ್ಯತೆಗಳನ್ನು ಪೂರೈಸಲು ಮಾರುಕಟ್ಟೆ ಸ್ಥಿತಿಯನ್ನು ಆಧರಿಸಿ ವಿಮಾನಗಳ ಒಂದು ಭಾಗವನ್ನು ರದ್ದುಗೊಳಿಸುವಂತೆ ಇದೇ ವೇಳೆ ವಿಮಾನ ಹಾರಾಟವನ್ನು ನಿರ್ಬಂಧಿಸಿರುವ ವಿದೇಶಗಳಿಗೆ ನಿರಂತರ ವಿಮಾನ ಹಾರಾಟ ನಡೆಸುವಂತೆ ಚೀನಾದ ನಾಗರಿಕ ವಿಮಾನಯಾನ ಆಡಳಿತ, ಚೀನಾದ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ. 

ಕೊರೊನಾವೈರಸ್ ನ ಕೇಂದ್ರಬಿಂದುವಾಗಿರುವ ಚೀನಾದ ವುಹಾನ್ ನಲ್ಲಿ ಕಳೆದ ಡಿಸೆಂಬರ್ ಅಂತ್ಯದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಈ ಸೋಂಕು 20 ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ವೈರಸ್ ಇದುವರೆಗೆ ಚೀನಾದಲ್ಲಿ 425 ಜನರನ್ನು ಬಲಿ ತೆಗೆದುಕೊಂಡಿದೆ.  20,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.