ಪಾಕಿಸ್ತಾನದಲ್ಲಿ 45 ಮಕ್ಕಳು ಪೊಲಿಯೋಗೆ ಬಲಿ

ಇಸ್ಲಾಮಾಬಾದ್, ಜುಲೈ 15 (ಯುಎನ್ಐ) ಪಾಕಿಸ್ತಾನದ ಪಂಜಾಬ್ ಹಾಗೂ ಖೈಬರ್ ಪಖ್ತೂನ್  ಪ್ರಾಂತ್ಯದಲ್ಲಿ ನಾಲ್ಕು ಪೊಲಿಯೋ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಲ್ಲಿಯವರೆಗೆ ದೇಶದಲ್ಲಿ 45 ಮಕ್ಕಳು ಪೊಲಿಯೋಗೆ ಬಲಿಯಾಗಿರುವುದು ವರದಿಯಾಗಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್ಐಹೆಚ್) ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ಲಾಹೋರ್, ಜೇಲಂ, ಬನು ಹಾಗೂ ಲಕ್ಕಿ ಮರ್ವತ್ ಎಂಬಲ್ಲಿ ಇತ್ತೀಚೆಗೆ ನಾಲ್ಕು ಪೊಲಿಯೋ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು. ಲಾಹೋರ್ ನಲ್ಲಿ 9 ತಿಂಗಳ ಗಂಡು ಮಗು, ಜೇಲಂನಲ್ಲಿ ನಾಲ್ಕು ವರ್ಷದ ಬಾಲಕ, ಬನುದಲ್ಲಿ 6 ತಿಂಗಳ ಗಂಡು ಮಗು ಹಾಗೂ ಲಕ್ಕಿ ಮರ್ವತ್ ನ ಒಂದು ವರ್ಷದ ಬಾಲಕಿ ಪೊಲಿಯೋಗೆ ಬಲಿಯಾಗಿದ್ದಾರೆಂದು ರವಿವಾರ ತಿಳಿದು ಬಂದಿದೆ. ಇಡೀ ದೇಶದಲ್ಲಿ ಇದುವರೆಗೆ ಸುಮಾರು 45 ಪೊಲಿಯೋ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳೆದ ವರ್ಷ 12 ಪ್ರಕರಣಗಳು ವರದಿಯಾಗಿದ್ದವು. ಪೊಲಿಯೋ ಪ್ರಕರಣದ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ವಿಷಯ ಕುರಿತು ಗಂಭೀರ ಚಿಂತನೆ ನಡೆಸಿದೆ.