370 ವಿಧಿ; ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ಅಕೋಲ, ಮಹಾರಾಷ್ಟ್ರ, ಅ 16:    ಜಮ್ಮು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸುತ್ತಿರುವ ವಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಬಾಬಾ ಸಾಹೆಬ್  ಅಂಬೇಡ್ಕರ್ ಅವರು ತಯಾರಿಸಿದ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸದಿರುವುದರ ಹಿಂದೆ ಕಾಂಗ್ರೆಸ್ ನ ದುರುದ್ದೇಶವಿದೆ ಎಂದಿದ್ದಾರೆ.  

ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಅವರು, ಪ್ರತಿಯೊಬ್ಬರೂ 370ನೇ ವಿಧಿ ರದ್ದತಿ ಕುರಿತು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ವಿಪಕ್ಷಗಳು ಮಾತ್ರ ಅಸಮಾಧಾನಗೊಂಡಿವೆ ಎಂದು ವ್ಯಂಗ್ಯವಾಡಿದರು.  

 ವಿಪಕ್ಷಗಳಿಗೆ 'ಒಂದು ಭಾರತ, ಶ್ರೇಷ್ಠ ಭಾರತ' ಬೇಕಿಲ್ಲ. ಅವರಿಗೆ ವಿಭಜಿತ, ಚೆಲ್ಲಾಪಿಲ್ಲಿಯಾದ ಹಾಗೂ ಹೋರಾಡುತ್ತಿರುವ ಭಾರತ ಬೇಕಿದೆ ಎಂದು ಟೀಕಿಸಿದರು.     

ಜಮ್ಮು ಕಾಶ್ಮೀರದ ಜನರು ತಾಯಿ ಭಾರತೀಯ ಮಕ್ಕಳು. ಅಲ್ಲಿನ ಭಯೋತ್ಪಾದನೆಯನ್ನು ತಡೆಯುವ ನಿಲುವಿಗೆ ಎಲ್ಲಾ ಭಾರತೀಯ ಬೆಂಬಲ ದೊರೆತಿದೆ ಎಂದರು.     

ಬಿಜೆಪಿ ಮಹಾತ್ಮಾ ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ವೀರ್ ಸಾವರ್ಕರ್ ಅವರಿಗೆ ಈ ಹಿಂದೆಯೇ ದೇಶದ ಅತ್ಯಂತ ಶ್ರೇಷ್ಠ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ'ಕ್ಕೆ ಶಿಫಾರಸು ಮಾಡಿತ್ತು. ವೀರ್ ಸಾವರ್ ಕರ್ ಅವರ ರಾಷ್ಟ್ರೀಯತಾವಾದವನ್ನೇ ನಾವು ರಾಷ್ಟ್ರ ಕಟ್ಟುವ ಕಾಯಕಕ್ಕೆ ಅಡಿಪಾಯವಾಗಿಸಿಕೊಂಡಿದ್ದೇವೆ. ಆದರೆ, ಪ್ರತಿ ಹಂತದಲ್ಲಿ ಬಾಬಾ ಸಾಹೆಬ್ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿರುವ ಜನರು ದಶಕಗಳಿಂದ  ಈ ಶಿಫಾರಸನ್ನು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದರು.     

ಮಹಾರಾಷ್ಟ್ರ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟ ಮೋದಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನೇತೃತ್ವದಲ್ಲಿ ರಾಜ್ಯ ಕಳೆದೈದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಕಂಡಿದೆ. ಇಲ್ಲಿನ ಅಮೋಲಾ ಜನರು ಮೋನರ್ಾ ನದಿಯ ಸ್ವಚ್ಛತೆಗೆ ಮುಂದಾಗಿರುವುದು ಶ್ಲಾಘನೀಯ ಸಂಗತಿ. ಈ ವಿಷಯವನ್ನು ತಾವು ಕಳೆದ ವರ್ಷ  'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದೆವು ಎಂದರು.     

 ಮೋದಿ ಅವರು ಮಹಾರಾಷ್ಟ್ರದ ಜಲ್ನಾ ಮತ್ತು ಪನ್ವೇಲ್ ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ 288 ವಿಧಾನಸಭಾ ಕ್ಷೇತ್ರಗಳಿಗೆ ವಿಧಾನಸಭಾ ಅ. 21ರಂದು ಚುನಾವಣೆ ನಡೆಯಲಿದ್ದು, ಅ.24ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.